ಬೆಂಗಳೂರು : ಪಿಎಫ್ಐ ಈಗ ಬ್ಯಾನ್ ಆದ ಸಂಘಟನೆ. ಈ ಸಂಘಟನೆಯ ಹೆಸರಲ್ಲಿ ಯಾವುದೇ ಚಟುವಟಿಕೆ ಮಾಡುವ ಹಾಗೆ ಇಲ್ಲ. ಪ್ರತಿಭಟನೆ ಮಾಡುವ ಹಾಗೆ ಇಲ್ಲ. ಪಿಎಫ್ಐ ಪರವಾಗಿ ಯಾರೇ ಧ್ವನಿ ಎತ್ತಿದರೂ ಕಾನೂನು ಕ್ರಮ ಗ್ಯಾರಂಟಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯಗಳಿಗೆ ಕೇಂದ್ರ ಅಧಿಕಾರ ಕೊಟ್ಟಿದೆ. ರಾಜ್ಯಕ್ಕೆ ಅಧಿಕಾರ ಕೊಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ ಪ್ರಕ್ರಿಯೆ ನಾವು ಮಾಡುತ್ತೇವೆ. ಮುಂದಿನ ಪ್ರಕ್ರಿಯೆಗಳು ಕಾನೂನು ಪ್ರಕಾರವೇ ಮಾಡುತ್ತೇವೆ ಎಂದರು.
ಪಿಎಫ್ಐ ಸೇರಿದಂತೆ 8 ಸಂಘಟನೆಗಳ ಬ್ಯಾನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ, ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಯಾವುದೇ ಗಲಾಟೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.










