ಚಿತ್ರದುರ್ಗ : ಮುರುಘಾ ಶ್ರೀಗಳ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 4ನೇ ಆರೋಪಿ ಎಸ್ ಜೆಎಂ ವಿದ್ಯಾಪೀಠದ ಮಾಜಿ ಕಾರ್ಯದರ್ಶಿ ಪರಮಶಿವಯ್ಯ ಅವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಪೊಲೀಸರು ಪರಮಶಿವಯ್ಯ ಅವರನ್ನು ಹಾಜರು ಪಡಿಸಿದ್ದು, ನವೆಂಬರ್ 3ರವರೆಗೆ ಪರಮಶಿವಯ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಕೋರ್ಟ್ ಆದೇಶ ನೀಡಿದೆ.
ಆರೋಪಿಗೆ ಬ್ರೈನ್ ಟ್ಯೂಮರ್ ಇರುವ ಕಾರಣ ವೈದ್ಯಕೀಯ ಸೌಲಭ್ಯ ಮತ್ತು ಸೂಕ್ತ ಆಹಾರ ಸೌಲಭ್ಯವನ್ನು ನೀಡುವಂತೆ ಆರೋಪಿ ಪರ ವಕೀಲರ ಮನವಿ ಮಾಡಿದ್ದಾರೆ. ಅಗತ್ಯವಿದ್ದಲ್ಲಿ ವೈದ್ಯಕೀಯ ಸೌಲಭ್ಯ, ಆಹಾರ ಒದಗಿಸಲು ಕೋರ್ಟ್ ಸೂಚನೆ ನೀಡಿದೆ. ನಿನ್ನೆಯಷ್ಟೇ ಸ್ವಾಮೀಜಿ ವಿರುದ್ಧ 694 ಪುಟಗಳ ಆರೋಪ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಐವರು ಆರೋಪಿಗಳ ವಿರುದ್ಧ ಪೋಕ್ಸೋ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಆಗಸ್ಟ್ 28ರಂದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.










