ಗ್ಯಾಂಗ್ರಿನ್‌ನಿಂದ ಬಳಲುತ್ತಿರುವ ಆ್ಯಸಿಡ್ ನಾಗ – ಪರಮ ಪಾಪಿಗೆ ದೇವರೇ ಶಿಕ್ಷೆ ಕೊಟ್ಟಿದ್ದಾನೆ ಎಂದ ಸಂತ್ರಸ್ತೆ…

64
firstsuddi

ಬೆಂಗಳೂರು : ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಯುವತಿ ಮೇಲಿನ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ ಇದೀಗ ಗ್ಯಾಂಗ್ರಿನ್ ನಿಂದ ಬಳಲುತ್ತಿದ್ದಾನಂತೆ.

ಇದೇ ವರ್ಷ ಏಪ್ರಿಲ್ 28ರಂದು ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ಮುತ್ತೂಟ್ ಫೈನಾನ್ಸ್ ಕಚೇರಿ ಬಳಿ ಯುವತಿ ಮೇಲೆ ಆ್ಯಸಿಡ್ ಹಾಕಿ ನಾಗೇಶ ಪರಾರಿಯಾಗಿದ್ದ. ಬಳಿಕ ಬೆಂಗಳೂರು ಪೊಲೀಸರು ತಮಿಳುನಾಡಿನ ಆಶ್ರಮದಲ್ಲಿ ಬಂಧಿಸಿ ಕರೆತಂದಿದ್ದರು. ಪೊಲೀಸರು ಬಂಧಿಸುವ ವೇಳೆ ಹಾರಿಸಿದ್ದ ಗುಂಡು ನಾಗನ ಕಾಲಿಗೆ ತಗುಲಿತ್ತು. ಇದೀಗ ಅದೇ ಗಾಯ ಗ್ಯಾಂಗ್ರಿನ್ ಗೆ ತಿರುಗಿದೆ.

ಸದ್ಯ ಆ್ಯಸಿಡ್ ಪ್ರಕರಣದ ಆರೋಪಿ ನಾಗೇಶ ಅಲಿಯಾಸ್ ಆ್ಯಸಿಡ್ ನಾಗ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಆದರೆ 6 ತಿಂಗಳಿನಿಂದ ಆತನ ಕಾಲಿಗೆ ಆಗಿರುವ ಗಾಯ ಗ್ಯಾಂಗ್ರಿನ್ ರೂಪ ಪಡೆದಿದೆಯಂತೆ. ನಡೆದಾಡುವುದಕ್ಕೂ ಆಗದ ಸ್ಥಿತಿಯಲ್ಲಿ ಇದ್ದಾನಂತೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯ ಜೈಲಿನ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆ್ಯಸಿಡ್ ನಾಗನಿಗೆ ಸೂಕ್ತ ಚಿಕಿತ್ಸೆ ಕೊಡಿಸುಂತೆ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಈ ವಿಚಾರ ಗೊತ್ತಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆ, ಪರಮ ಪಾಪಿಗೆ ದೇವರೇ ಸರಿಯಾದ ಶಿಕ್ಷೆ ಕೊಟ್ಟಿದ್ದಾನೆ. ಆಸ್ಪತ್ರೆಯಲ್ಲಿ ಮೂರು ತಿಂಗಳು ನೋವಲ್ಲಿದ್ದೆ. ಈಗಲೂ ನೋವು ಅನುಭವಿಸುತ್ತಿದ್ದೇನೆ. ಅದೇ ನೋವು ಆತನಿಗೂ ಗೊತ್ತಾಗಬೇಕು. ಆತನ ಮೈಯೆಲ್ಲ ಕೊಳೆತು ಹೋಗಬೇಕು, ಬರೀ ಒಂದು ಕಾಲಲ್ಲ, ಕಾನೂನು ಪ್ರಕಾರ ಶಿಕ್ಷೆ ಕೊಡಬೇಕು. ನನಗೆ ದೇವರ ಮೇಲೆ ನಂಬಿಕೆ ಇದೆ, ದೇವರೇ ಶಿಕ್ಷೆ ನೀಡಿದ್ದಾನೆ ಎಂದು ಹೇಳಿದ್ದಾಳೆ.