ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದರು. ಬಳಿಕ ಸಮಾರಂಭದಲ್ಲಿ ರಾಷ್ಟ್ರಕವಿ ಕುವೆಂಪು ಅವರನ್ನು ಸ್ಮರಿಸಿ, ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು.
ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ ಮೋದಿಯವರು, ನೆರದಿದ್ದ ಜನರಿಗೆ ತಮ್ಮ ಮೊಬೈಲ್ ಟಾರ್ಚ್ ಆನ್ ಮಾಡಿ ಬಿಎಸ್ ಯಡಿಯೂರಪ್ಪನವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಲು ಹೇಳಿದರು. ಬಳಿಕ ಬಿ.ಎಸ್ ಯಡಿಯೂರಪ್ಪ ಅವರನ್ನು ಕೊಂಡಾಡಿದರು.
ಇಂದು ಬಿ.ಎಸ್ ಯಡಿಯೂರಪ್ಪ ಅವರ ಜನ್ಮದಿನವಾಗಿದೆ. ಅವರು ತಮ್ಮ ಜೀವನವನ್ನು ಬಡವರಿಗೆ, ರೈತರಿಗಾಗಿ ಸಮರ್ಪಿಸಿದ್ದಾರೆ. ಬಿಎಸ್‌ವೈ ಹಿಂದಿನ ವಾರ ವಿಧಾನಸಭೆಯಲ್ಲಿ ನೀಡಿದ ಭಾಷಣವು ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.
50 ವರ್ಷಗಳಿಂದ ಯಡಿಯೂರಪ್ಪನವರು ಜನಸೇವೆಯಲ್ಲಿದ್ದಾರೆ. ಅಭಿವೃದ್ಧಿ ರಥದಲ್ಲಿ ಕರ್ನಾಟಕ ಸಾಗುತ್ತಿದೆ. ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯ ರಥ ಸಾಗುತ್ತಿದೆ. ವಿಮಾನಯಾನ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿದೆ. 2014ರಕ್ಕಿಂತ ಮೊದಲು ಕೇವಲ ದೊಡ್ಡ ನಗರಗಳಿಗೆ ಮಾತ್ರ ವಿಮಾನ ನಿಲ್ದಾಣ ಸೀಮಿತವಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಣ್ಣಪುಟ್ಟ ನಗರಗಳಲ್ಲಿಯೂ ಏರ್ಪೋರ್ಟ್ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಹವಾಯಿ ಚಪ್ಪಲಿ ಧರಿಸುವ ಕಡು ಬಡವರು ಕೂಡ ವಿಮಾನದಲ್ಲಿ ಪ್ರಯಾಣಿಸಬೇಕು. ಇದು ಬಿಜೆಪಿ ಸರ್ಕಾರದ ಧ್ಯೇಯವಾಗಿದೆ ಎಂದು ತಿಳಿಸಿದರು.
ಶಿವಮೊಗ್ಗ ಪಶ್ಚಿಮ ಘಟ್ಟದಲ್ಲಿ ಬರುವ ಮಲೆನಾಡಿನ ಹೆಬ್ಬಾಗಿಲು. ಇಲ್ಲಿ ನದಿ, ವನ್ಯ ಸಂಪತ್ತು ಅದ್ಭುತವಾಗಿದೆ. ಇಲ್ಲಿ ಜೋಗ್ ಜಲಪಾತ, ಆನೆಗಳ ಬಿಡಾರವೂ ಇದೆ. ಆಗುಂಬೆಯ ಸೂರ್ಯಾಸ್ತ ಯಾರು ಮರೆಯೋದಕ್ಕೆ ಸಾಧ್ಯವಿಲ್ಲ. ಗಂಗಾ ಸ್ನಾನ, ತುಂಗಾ ಪಾನ ಎಂದು ಉಕ್ತಿಯೇ ಇದೆ. ಸಿಗಂದೂರು ಚೌಡೇಶ್ವರಿ, ಕೋಟೆ ಆಂಜನೇಯ ದೇವಸ್ಥಾನವಿದೆ. ಇಲ್ಲಿಗೆ ವಿಮಾನ ಪ್ರಯಾಣದ ಸಂಪರ್ಕ ಅವಶ್ಯಕವಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಅಭಿವೃದ್ಧಿ ಆಗಲಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ ನಿರ್ಮಾಣವಾದ್ರೆ ಸಾಕಷ್ಟು ಲಾಭವಾಗಲಿದೆ. ಹಾವೇರಿವರೆಗೂ ಜನರಿಗೆ ಸಂಪರ್ಕ ಸಾಧ್ಯವಾಗುತ್ತದೆ ಎಂದು ಹೇಳಿದರು.










