ಹುಬ್ಬಳ್ಳಿ : ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಗರದ ಬೈಪಾಸ್ ರಿಂಗ್ ರೋಡ್ ಬ್ರಿಡ್ಜ್ ಬಳಿ ನಿನ್ನೆ ನಡೆದಿದೆ. ಘಟನೆ ಸಂಬಂಧ ನಾಲ್ವರ ವಿರುದ್ಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆ ಜೊತೆಗೆ ಕೆಲ ದಿನಗಳಿಂದ ಫೋನ್ ನಲ್ಲಿ ದೇವರಾಜ ಎಂಬಾತ ಮಾತನಾಡುತ್ತಿದ್ದ. ಇಬ್ಬರ ನಡುವೆ ಸ್ನೇಹ ಸಹ ಬೆಳೆದಿತ್ತು. ಈ ಸಲುಗೆಯಿಂದ ಮೊಬೈಲ್ ಕೊಡಿಸುವ ಆಮಿಷ ತೋರಿಸಿ, ಬಾಲಕಿಯನ್ನು ಹುಬ್ಬಳ್ಳಿಗೆ ಕರೆಸಿದ್ದ. ಬಾಲಕಿ ಜೊತೆಗೆ ಸಿಟಿ ಸುತ್ತಿ, ನಂತರ ಖಾಸಗಿ ಹೋಟೆಲ್ ವೊಂದಕ್ಕೆ ಕರೆದುಕೊಂಡು ಹೋದ ದೇವರಾಜ ತನ್ನ ಮತ್ತೊಬ್ಬ ಸ್ನೇಹಿತ ಫಕಿರೇಶ ಜೊತೆ ಸೇರಿಕೊಂಡು ಬಾಲಕಿ ಮೇಲೆ ಹಲ್ಲೆ ನಡೆಸಿದ್ದಾನೆ.
ಬಳಿಕ ಬೈಕ್ ನಲ್ಲಿ ಹುಬ್ಬಳ್ಳಿ ಬೈಪಾಸ್ ರಿಂಗ್ ರೋಡ್ ನಲ್ಲಿನ ಬ್ರಿಡ್ಜ್ ಬಳಿಗೆ ಕರೆದುಕೊಂಡು ಹೋಗಿ ಇಬ್ಬರು ಜೀವ ಬೆದರಿಕೆ ಹಾಕಿ ಬಲವಂತವಾಗಿ ಅತ್ಯಾಚಾರ ಮಾಡಿದ್ದಾರೆ. ಬಳಿಕ ತನ್ನಿಬ್ಬರು ಸ್ನೇಹಿತರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿ ಅವರ ಕೈಯಿಂದಲೂ ಅತ್ಯಾಚಾರ ಮಾಡಿಸಿದ್ದಾನೆ.
ಇಬ್ಬರನ್ನು ಬಾಲಕಿ ಗುರುತಿಸಿದ್ದು, ಇನ್ನಿಬ್ಬರನ್ನು ಕಂಡರೆ ಗುರುತಿಸುವುದಾಗಿ ಬಾಲಕಿ ಹೇಳಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.










