ಚುನಾವಣಾ ರಾಜಕೀಯದಿಂದ ಹಿಂದೆ ಸರಿಯೋ ನಿರ್ಧಾರಕ್ಕೆ ಬಂದಿದ್ದೇನೆ – ರಮಾನಾಥ್ ರೈ.

41
firstsuddi

ಮಂಗಳೂರು: ಚುನಾವಣಾ ರಾಜಕೀಯದಿಂದ ಹಿಂದೆ ಸರಿಯೋ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಮಾಜಿ ಸಚಿವ ರಮಾನಾಥ್ ರೈ ಅವರು ಹೇಳಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಯಸ್ಸಿನ ಕಾರಣದಿಂದಾಗಿ ನನ್ನ ಸ್ಪರ್ಧೆಯ ಬಗ್ಗೆ ಪಕ್ಷದವರೇ ಅಪಸ್ವರ ಎತ್ತಿದ್ದರಿಂದಾಗಿ ಮುಂದೆ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಆದರೆ ಕಾಂಗ್ರೆಸ್ ಗೆ ಶಕ್ತಿ ತುಂಬುವ ಕೆಲಸದಲ್ಲಿ ಸಕ್ರಿಯನಾಗಿರುತ್ತೇನೆ. ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ. ಹಿಂದಿನಿಂದಲೂ ಹೈಕಮಾಂಡ್ ನ ಎಲ್ಲ ಆದೇಶ ತಪ್ಪದೆ ಪಾಲಿಸುತ್ತಾ ಬಂದಿದ್ದೇನೆ. ಈ ಬಾರಿ ನನ್ನ ಸೋಲಿನ ಮತಗಳ ಅಂತರ ಕಡಿಮೆಯಾಗಿದೆ. ಗೆಲುವಿನ ವಿಶ್ವಾಸವಿತ್ತು. ಆದರೂ ಸೋಲಾಗಿದೆ ಎಂದರು.

ಜನರಿಗಾಗಿ ಸದಾ ಕೆಲಸ ಮಾಡುತ್ತೇನೆ. ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಆದರೆ ಇದರಿಂದ ಕಾರ್ಯಕರ್ತರು ಎದೆಗುಂದ ಬೇಕಾಗಿಲ್ಲ. ಲೋಕಸಭಾ ಚುನಾವಣೆ, ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ಪಾರ್ಟಿ ವಿರುದ್ಧ ನಾನು ಈವರೆಗೂ ಒಂದು ಶಬ್ದದ ಅಪಸ್ವರವನ್ನು ಎತ್ತಿಲ್ಲ. ಪಕ್ಷದ ಋಣವನ್ನು ಜೀವನ ಪರ್ಯಂತ ತೀರಿಸುತ್ತೇನೆ. ಸೋಲಿನ ಅವಲೋಕನವನ್ನು ಮಾಡಿದ್ದೇನೆ. ಚುನಾವಣೆ ಅನ್ನೋದು ನಾವು ಗ್ರಹಿಸಿದ ರೀತಿ ಆಗೋದಿಲ್ಲ. ಚುನಾವಣೆ ಗೆಲ್ಲುವ ವಿಶ್ವಾಸದಲ್ಲಿದ್ದೆ, ಸಮೀಕ್ಷೆಗಳೂ ಗೆಲ್ಲುವ ರೀತಿ ಇತ್ತು. ಸೋಲಿನ ಬಗ್ಗೆ ಅವಲೋಕನ ಮಾಡುತ್ತಿದ್ದೇನೆ. ಮಂಗಳೂರು, ಪುತ್ತೂರು ಹೊರತುಪಡಿಸಿ ಬೇರೆ ಎಲ್ಲಾ ಕಡೆ ಹಿನ್ನಡೆಯಾಗಿದೆ ಎಂದು ರಮಾನಾಥ್ ರೈ ತಿಳಿಸಿದರು.