ಮುಖ್ಯಮಂತ್ರಿ ಆಯ್ಕೆ ಇನ್ನೂ ಅಂತಿಮವಾಗಿಲ್ಲ, ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡಬೇಡಿ – ಸುರ್ಜೇವಾಲ ಸ್ಪಷ್ಟನೆ…

58
firstsuddi

ನವದೆಹಲಿ: ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಅಂತಿಮವಾಗಿ ಸಿಎಂ ಆಯ್ಕೆ ಆಗಿಲ್ಲ. ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ.

ಹೈಕಮಾಂಡ್ ಜತೆ ಹಲವು ಸುತ್ತಿನ ಸಭೆಗಳ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದ ಬಳಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸುರ್ಜೇವಾಲ, ಕಾಂಗ್ರೆಸ್ ನಿರ್ಧಾರ ಕೈಗೊಂಡಾಗ ನಾವು ತಿಳಿಸುತ್ತೇವೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇನ್ನು 48-72 ಗಂಟೆಗಳಲ್ಲಿ ಕರ್ನಾಟಕದಲ್ಲಿ ಹೊಸ ಸಚಿವ ಸಂಪುಟ ರಚನೆಯಾಗಲಿದೆ ಎಂದು ಹೇಳಿದ್ದಾರೆ.

ಸಿಎಂ ಆಯ್ಕೆ ವಿಚಾರವಾಗಿ ಈಗ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದ ಸುರ್ಜೇವಾಲ, ಶಾಸಕಾಂಗ ಪಕ್ಷದ ನಾಯಕರು ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. ಇಂದು ಅಥವಾ ನಾಳೆ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಎಐಸಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಆದರೆ ನಾಳೆ ಪ್ರಮಾಣವಚನ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ವದಂತಿಗಳು ಹರಡಿದ್ದು, ರಾಜ್ಯದ ಹಲವೆಡೆ ಸಿದ್ದರಾಮಯ್ಯ ಬೆಂಬಲಿಗರು ಸಂಭ್ರಮವನ್ನೂ ವ್ಯಕ್ತಪಡಿಸಿದ್ದರು. ಹಲವೆಡೆ ಸಂಭ್ರಮಾಚರಣೆ ಆರಂಭವಾಗಿತ್ತು. ಇದರ ಬೆನ್ನಲ್ಲೇ ಸುರ್ಜೇವಾಲ ಅವರು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.