ಚಿಕ್ಕಮಗಳೂರು – ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿನ ನಿವೇಶನ ಮತ್ತು ವಸತಿ ರಹಿತ ಬಡವರಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಸದ್ಯದಲ್ಲೇ ನಿವೇಶನ ಮತ್ತು ಮನೆ ವಿತರಿಸಲಾಗುವುದು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು. ತಾಲೂಕಿನ ಮಲ್ಲಂದೂರಿನಲ್ಲಿ 38 ಲಕ್ಷ ರೂ ವೆಚ್ಚದ ಬ್ಯಾರವಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ನಿವೇಶನ ಮತ್ತು ವಸತಿ ರಹಿತರ ಪಟ್ಟಿಯ ಪರಿಷ್ಕರಣೆ ಈಗಾಗಲೇ ನಡೆಯುತ್ತಿದ್ದು, ಎಲ್ಲಾ ವರ್ಗದ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ರಹಿತರಿಗೆ ನಿವೇಶನ ಮತ್ತು ವಸತಿ ರಹಿತರಿಗೆ ಮನೆ ನೀಡಲಾಗುವುದು ಎಂದು ತಿಳಿಸಿದರು.ನಿವೇಶನ ಮತ್ತು ವಸತಿ ರಹಿತರ ಪಟ್ಟಿ ಪರಿಷ್ಕರಣೆಗೆ ಮಂಗಳವಾರ ಅಂತಿಮ ದಿನವಾಗಿರುವ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದೊಂದಿಗೆ ಮಾತನಾಡಿ ಪರಿಷ್ಕರಣೆ ಕಾಲಾವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಲಾಗುವುದು ಎಂದರು.ನೂತನವಾಗಿ ನಿರ್ಮಿಸುತ್ತಿರುವ ಗ್ರಾಮ ಪಂಚಾಯಿತಿ ಕಟ್ಟಡವನ್ನು ಜಿಲ್ಲೆಯಲ್ಲೇ ಮಾದರಿಯಾಗುವಂತೆ ನಿರ್ಮಿಸಬೇಕು ಒಂದು ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.ತಾಲ್ಲೂಕು ಪಂಚಾಯಿತಿ ಸದಸ್ಯೆ ಶಾರದಾ ಶಶಿಧರ್, ಮಾಜಿ ಅಧ್ಯಕ್ಷ ಎನ್.ಎಂ.ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಸಿ.ರಘುನಾಥ್, ಉಪಾಧ್ಯಕ್ಷ ನಾಗೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗರಾಜ್, ಬಿಜೆಪಿ ಹೋಬಳಿ ಅಧ್ಯಕ್ಷ ರವಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎನ್.ಎಸ್.ಜಗನ್ನಾಥ್ ಹಾಜರಿದ್ದರು.










