ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮಂಗಳೂರು ಹೊರವಲಯದ ಪಿಲಾರು ಎಂಬಲ್ಲಿ ಮೋರಿ ದಾಟುವ ವೇಳೆ ಆಯತಪ್ಪಿ ನೀರಿಗೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಪಂಜಂದಾಯ ದೈವಸ್ಥಾನದ ಬಳಿಯ ಬಾಡಿಗೆ ಮನೆ ನಿವಾಸಿ ಸುರೇಶ್ ಗಟ್ಟಿ(52 ವರ್ಷ) ಮೃತ ವ್ಯಕ್ತಿಯಾಗಿದ್ದು, ಸುರೇಶ್ ಗಟ್ಟಿ ಅವರು ವೃತ್ತಿಯಲ್ಲಿ ಪೈಂಟರ್ ಆಗಿದ್ದರು ಎಂದು ತಿಳಿದುಬಂದಿದೆ. ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮನೆ ಸಂಪರ್ಕದ ಮೋರಿ ದಾಟುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ. ಧಾರಾಕಾರ ಮಳೆ ಸುರಿಯುತ್ತಿದ್ದು ಮಳೆ ನೀರಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಭಟ್ಕಳ, ಹೊನ್ನಾವರ ಹಾಗೂ ಕುಮಟಾ ತಾಲೂಕುಗಳಿಗೆ ರಜೆ ಘೋಷಿಸಲಾಗಿದೆ.










