ಬೆಂಗಳೂರು: ಭಾರತದ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ನೌಕೆಯ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸುವ ಈ ಮಹತ್ವದ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಾರತೀಯರು ಕಾತುರರಾಗಿದ್ದಾರೆ.
ಪ್ರಗ್ಯಾನ್ ರೋವರ್ ಅನ್ನು ಹೊತ್ತ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿದ್ದು, ದಕ್ಷಿಣ ಧ್ರುವದ ಮೇಲೆ ಸಂಜೆ 6:04ರ ವೇಳೆಗೆ ಯಾವುದೇ ಅಡೆತಡೆ ಇಲ್ಲದೇ ಚಂದ್ರನ ಅಂಗಳದಲ್ಲಿ ಇಳಿಯುವ ಮೂಲಕ ಇತಿಹಾಸ ನಿರ್ಮಿಸುವ ಭರವಸೆ ಮೂಡಿಸಿದೆ. ಜುಲೈ 14ರಂದು ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದ್ದ ಇಸ್ರೋದ ಚಂದ್ರಯಾನ- 3 ನೌಕೆಯ ಇಷ್ಟು ದಿನದ ಪಯಣದಂತೆಯೇ ಕೊನೆಯ 20 ನಿಮಿಷಗಳ ಯಾನ ಅತ್ಯಂತ ನಿರ್ಣಾಯಕವಾಗಿದೆ.
ಯಾವುದೇ ತಾಂತ್ರಿಕ ವೈಫಲ್ಯವಾದರೂ ಲ್ಯಾಂಡರ್ ಅನ್ನು ಸುಗಮವಾಗಿ ಇಳಿಸಲು ಇಸ್ರೋ ಈ ಬಾರಿ ವೈಫಲ್ಯದ ಮಾಡೆಲ್ ಅಳವಡಿಸಿಕೊಂಡಿದೆ. ದಕ್ಷಿಣ ಧ್ರುವದಲ್ಲಿನ ರಹಸ್ಯ ಅರಿಯುವ ಈ ಯೋಜನೆ ಯಶಸ್ವಿಯಾದರೆ, ಅಲ್ಲಿಗೆ ಕಾಲಿಟ್ಟ ವಿಶ್ವದ ಮೊದಲ ದೇಶ ಎಂಬ ಹಿರಿಮೆ ಭಾರತಕ್ಕೆ ದಕ್ಕಲಿದೆ.










