ಚಿಕ್ಕಮಗಳೂರು -ಯುವಜನತೆ ವಿದ್ಯಾರ್ಥಿ ದೆಸೆಯಲ್ಲಿ ಓದಿಗೆ ಮಾತ್ರ ಮಹತ್ವ ನೀಡಬೇಕು, ಶ್ರದ್ದೆಯಿಂದ ವಿದ್ಯಾರ್ಜನೆ ಮಾಡಿ ಶಿಕ್ಷಣವಂತರಾಗಬೇಕು ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಸಲಹೆ ಮಾಡಿದರು.ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದ ಎಂಇಎಸ್ ವಿದ್ಯಾ ಸಂಸ್ಥೆಯಲ್ಲಿ ಸೋಮವಾರ ನೀಡಿದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.ವಿದ್ಯಾರ್ಥಿ ದೆಸೆಯಲ್ಲಿ ಬಹಳಷ್ಟು ಆಕರ್ಷಣೆಗಳಿರುತ್ತವೆ, ಅವುಗಳ ಹಿಂದೆ ಹೋದರೆ ವಿದ್ಯಾಭ್ಯಾಸ ಕುಂಠಿತವಾಗಿ ಬದುಕು ಹಾದಿ ತಪ್ಪುತ್ತದೆ ಎಂದು ಎಚ್ಚರಿಸಿದ ಅವರು ವಿದ್ಯಾರ್ಥಿಗಳು ಇದನ್ನು ಅರಿಯಬೇಕು, ಓದಿಗೆ ಮಾತ್ರ ಪ್ರಾಮುಖ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯದಲ್ಲಿ 93 ಖಾಸಗಿ ಪದವಿ ಕಾಲೇಜುಗಳು ಅನುದಾನ ರಹಿತವಾಗಿವೆ ಇದರಿಂದಾಗಿ ಬಹಳಷ್ಟು ಕಾಲೇಜುಗಳು ನಷ್ಟದಲ್ಲಿ ನಡೆಯುತ್ತಿವೆ ಎಂದ ಅವರು ಇದರ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎನ್.ಕೇಶವಮೂರ್ತಿ ತಮ್ಮ ಕಾಲೇಜಿನ ನಿರ್ದೇಶಕರೋರ್ವರು ಶಾಸಕರಾಗಿ ಆಯ್ಕೆಯಾಗಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದರು.ಶಾಸಕ ಟಿ.ಡಿ.ರಾಜೇಗೌಡ ದಂಪತಿಯನ್ನು ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು, ಎಂಇಎಸ್ ಪದವಿ ಕಾಲೇಜಿಗೆ ಸರ್ಕಾರದ ಅನುದಾನ ದೊರಕಿಸಿ ಕೊಡುವುದರ ಜೊತೆಗೆ ಕೆ.ಆರ್.ಪೇಟೆಯ ಶಾಲೆಯ ಭೂಮಿಯನ್ನು ಸಂಸ್ಥೆಯ ಹೆಸರಿಗೆ ಮಂಜೂರು ಮಾಡಿಕೊಡುವಂತೆ ಮನವಿ ಸಲ್ಲಿಸಲಾಯಿತು.ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಉಪಾಧ್ಯಕ್ಷೆ ರಾಧಾಸುಂದರೇಶ್, ಖಜಾಂಚಿ ಡಿ.ಹೆಚ್.ನಟರಾಜ್, ಸಹಕಾರ್ಯದರ್ಶಿ ಎಸ್.ಶಂಕರನಾರಾಯಣ ಭಟ್, ಕಾರ್ಯಕಾರಿ ಮಂಡಳಿ ಸದಸ್ಯೆ ಜಯಶ್ರೀ ಜೋಷಿ, ಆಡಳಿತಾಧಿಕಾರಿ ಎಸ್.ಶಾಂತಕುಮಾರಿ, ಪ್ರಾಂಶುಪಾಲ ಡಾ|| ಹೆಚ್.ವಿಷ್ಣುವರ್ಧನ್ ಉಪಸ್ಥಿತರಿದ್ದರು.










