ಅನ್ಯ ಕೋಮಿನ ಯುವಕರಿಂದ ಹಿಂದೂ ಯುವಕನಿಗೆ ಚಾಕು ಇರಿತ…

62
firstsuddi

ಶಿವಮೊಗ್ಗ: ಹಿಂದೂ ಯುವಕನೊಬ್ಬನಿಗೆ ಅನ್ಯ ಕೋಮಿನ ಯುವಕರು ಚಾಕುವಿನಿಂದ ಇರಿದಿರುವ ಘಟನೆ ಜಿಲ್ಲೆಯ ಭದ್ರಾವತಿಯ ಹನುಮಂತನಗರದ ಬಡಾವಣೆಯಲ್ಲಿ ನಡೆದಿದೆ.

ನಂದಕುಮಾರ್ (32) ಚಾಕು ಇರಿತಕ್ಕೊಳಗಾದ ಯುವಕ. ಮೊಬೈಲ್ ವಿಚಾರವಾಗಿ ನಂದಕುಮಾರ್ ಮತ್ತು ಏರಿಯಾದ ಯುವಕರ ಗುಂಪಿನ ನಡುವೆ ಜಗಳ ನಡೆದಿದೆ. ಈ ವೇಳೆ ಈ ಗುಂಪು ನಂದಕುಮಾರ್ ಬೆನ್ನಿಗೆ ಚಾಕುವಿನಿಂದ ಇರಿದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಯುವಕ ಭದ್ರಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಅನ್ಯಕೋಮಿನ ಯುವಕರ ಗುಂಪು ನಂದಕುಮಾರ್ ಬಳಿ ಕರೆ ಮಾಡಲು ನಿನ್ನ ಮೊಬೈಲ್ ಕೊಡು ಎಂದು ಕೇಳಿದೆ. ನಂದಕುಮಾರ್ ಮೊಬೈಲ್ ಕೊಡಲು ನಿರಾಕರಿಸಿದಾಗ ಆತನ ಮೇಲೆ ಪುಂಡರು ಹಲ್ಲೆ ನಡೆಸಿದ್ದರು. ಇದರ ಬಗ್ಗೆ ದೂರು ನೀಡಲು ನಂದಕುಮಾರ್ ಪೊಲೀಸ್ ಠಾಣೆಗೆ ತೆರಳಿದ್ದು, ಠಾಣೆಯಿಂದ ವಾಪಸ್ ಬರುತ್ತಿದ್ದಾಗ ಚೂರಿಯಿಂದ ಹಲ್ಲೆ ನಡೆಸಿದ್ದಾರೆ.

ಅನ್ಯಕೋಮಿನ ಯುವಕರಿಂದ ಹಲ್ಲೆ ನಡೆದಿರುವ ಸುದ್ದಿ ತಿಳಿದ ಹಿಂದೂ ಕಾರ್ಯಕರ್ತರು ರಾತ್ರೋರಾತ್ರಿ ಆಸ್ಪತ್ರೆ ಮುಂದೆ ಜಮಾಯಿಸಿದರು. ಪುಂಡರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಘಟನೆ ಸಂಬಂಧ ನಂದಕುಮಾರ್, ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.