ದಕ್ಷಿಣ ಕನ್ನಡ: ಮಂಗಳೂರಿನಲ್ಲಿ ನಿನ್ನೆ ವಿವಾಹಿತ ಮಹಿಳೆಯ ಶವ ಬಾವಿಯಲ್ಲಿ ಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಮದುವೆಯಾಗಿ ಮಕ್ಕಳಿದ್ದರೂ ತನ್ನ ಗಂಡ ಬೇರೊಂದು ಯುವತಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದನ್ನು ಪ್ರಶ್ನಿಸಿದ ಪತ್ನಿಯ ಮೇಲೆ ಹಲ್ಲೆ ಮಾಡಿ, ನಂತರ ಬಾವಿಗೆ ಬೀಸಾಡಿದ ಘಟನೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಚಾರೆ ಎಂಬಲ್ಲಿ ನಡೆದಿದೆ.
ಬೆಳಾಲು ಗ್ರಾಮದ ಮಾಚಾರಿನ ಜ್ಯೋತಿ ನಗರದಲ್ಲಿನ ಮನೆಯಲ್ಲಿರುವ ಬಾವಿಯಲ್ಲಿ ಶಶಿಕಲಾ (25) ಅವರ ಶವ ಪತ್ತೆಯಾಗಿತ್ತು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಶಿಕಲಾ ಮತ್ತು ಸುಧಾಕರ್ ಕಳೆದ 7 ವರ್ಷಗಳ ಹಿಂದೆ ಪ್ರೀತಿ ಮಾಡಿ ಮದುವೆಯಾಗಿದ್ದರು. ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ 6 ವರ್ಷದ ಮಗಳು ಕೂಡ ಇದ್ದಾಳೆ. ಆದರೆ, ಸುಧಾಕರ್ಗೆ ಬೇರೊಂದು ಯುವತಿಯ ಜೊತೆ ಅಕ್ರಮ ಸಂಬಂಧ ಇರುವುದು ಗೊತ್ತಾಗಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಅಲ್ಲದೆ, ನಿನ್ನೆ ಕೂಡ ಜಗಳ ನಡೆದಿದೆ. ಇದು ತಾರಕಕ್ಕೇರಿ ಸುಧಾಕರ್, ಪತ್ನಿ ಶಶಿಕಲಾಳ ಕುತ್ತಿಗೆ ಹಿಸುಕಿದ್ದಾನೆ. ಪರಿಣಾಮ ಆಕೆ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಬಳಿಕ ಹೆಂಡತಿಯನ್ನು ಬಾವಿಗೆ ಎಸೆದು ಕೊಲೆ ಮಾಡಿದ್ದಾನೆ.










