ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್ ಪಾರ್ಥಿವ ಶರೀರ ಇಂದು ಸಂಜೆ ಬೆಂಗಳೂರಿಗೆ ಆಗಮನ…

91
firstsuddi

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರ ಪಾರ್ಥಿವ ಶರೀರ ಇಂದು ಸಂಜೆ ಬೆಂಗಳೂರಿಗೆ ಆಗಮಿಸಲಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ರಜೌರಿಯಲ್ಲಿ ಉಗ್ರರ ಅಟ್ಟಹಾಸ ಹತ್ತಿಕ್ಕಲು ಹೋದವರಲ್ಲಿ ಕರ್ನಾಟಕ ಸುಪುತ್ರ ಮೈಸೂರು ಮೂಲದವರು ಆನೇಕಲ್​ನಲ್ಲಿ ವಾಸವಾಗಿರುವ ಕ್ಯಾಪ್ಟನ್ ಪ್ರಾಂಜಲ್ ಕೂಡ ಒಬ್ಬರು. ಎದೆಗೆ ಎದೆಕೊಟ್ಟು ಹೋರಾಡದ ಗುಳ್ಳೆನರಿಗಳು ಹಿಂದಿನಿಂದ ದಾಳಿ ಮಾಡಿದ್ದರು. ಆಗ ಉಗ್ರನನ್ನೂ ಕೊಂದು ಕ್ಯಾಪ್ಟನ್ ಪ್ರಾಂಜಲ್ ಕೂಡ ಹುತಾತ್ಮರಾಗಿದ್ದರು.

3ನೇ ವಯಸ್ಸಲ್ಲಿ ಯೋಧನಾಗುವ ಆಸೆ ಹೊತ್ತಿದ್ದ ಕ್ಯಾಪ್ಟನ್ ಪ್ರಾಂಜಲ್, ಕೆಮಿಕಲ್ ಎಂಜಿನಿಯರಿಂಗ್ ಕೋರ್ಸ್ ವ್ಯಾಸಂಗವನ್ನೂ ಅರ್ಧಕ್ಕೆ ಬಿಟ್ಟು ಸೇನೆಗೆ ಸೇರಿದ್ದರು. 2 ವರ್ಷದ ಹಿಂದೆ 63 ಬೆಟಾಲಿಯನ್ ಕ್ಯಾಪ್ಟನ್ ಆಗಿ ಜಮ್ಮು ಕಾಶ್ಮೀರದಲ್ಲಿ ನಿಯೋಜನೆಗೊಂಡಿದ್ದರು. ಆದರೆ ಬುಧವಾರ ನಡೆದ ಉಗ್ರರ ವಿರುದ್ಧ ಕಾಳಗದಲ್ಲಿ ಹುತಾತ್ಮರಾಗಿದ್ದು, ಪೋಷಕರು ಶೋಕಸಾಗರದಲ್ಲಿ ಮುಳುಗಿದ್ದಾರೆ.

ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರ ಇಂದು ಸಂಜೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ನಂತರ ಅವರ ಪಾರ್ಥಿವ ಶರೀರವನ್ನು ಬನ್ನೇರುಘಟ್ಟದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗುವುದು. ನಾಳೆ ಬೆಳಗ್ಗೆ ಪುಷ್ಪ ನಮನ ಮತ್ತು ಸೇನಾ ಗೌರವದ ನಂತರ ಅಂತಿಮ ವಿಧಿ ವಿಧಾನಗಳು ನಡೆಯಲಿವೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.