ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು- ಸ್ಥಳದಲ್ಲೇ ಆರು ಮಂದಿ ದಾರುಣ ಸಾವು…

38
firstsuddi

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಥಳದಲ್ಲೇ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮೃತರನ್ನು 30 ವರ್ಷದ ಕಾರು ಚಾಲಕ ಶಾರುಖ್ ಪೆಂಡಾರಿ, 50 ವರ್ಷದ ಇಕ್ಬಾಲ್ ಜಮಾದಾರ್, 37 ವರ್ಷದ ಶಬನಮ್ ಲಂಗೋಟಿ, 17 ವರ್ಷದ ಸಾನಿಯಾ ಲಂಗೋಟಿ, 12 ವರ್ಷದ ಉಮರ್ ಲಂಗೋಟಿ ಮತ್ತು 13 ವರ್ಷದ ಫರಾನ್ ಲಂಗೋಟಿ ಎಂದು ತಿಳಿದುಬಂದಿದೆ.

ಧಾರವಾಡ ಮೂಲದವರಾದ ಇವರು ಸ್ವಿಫ್ಟ್ ಕಾರಿನಲ್ಲಿ ಸುಮಾರು 10 ಮಂದಿ ಮದುವೆ ಮುಗಿಸಿ ವಾಪಸ್ ಮರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ನಾಲ್ವರು ಗಾಯಾಳುಗಳನ್ನು ಸ್ಥಳೀಯ ಹಾಗೂ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಬೆಳಗಾವಿ ಎಸ್‌ಪಿ ಡಾ. ಭೀಮಾಶಂಕರ ಗುಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.