ಅಪರಿಚಿತ ಮಹಿಳೆಯ ಮೇಲೆ ಅತ್ಯಾಚಾರ, ಕೊಲೆ- ಆಟೋ ಚಾಲಕನ ಬಂಧನ…

45
firstsuddi

ಬೆಂಗಳೂರು: ಅಪರಿಚಿತ ಮಹಿಳೆಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿ ಪರಾರಿಯಾಗಿದ್ದ ಆಟೋ ಚಾಲಕನನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಂಜನಪ್ಪ ಗಾರ್ಡನ್ ನಿವಾಸಿ ಮುಬಾರಕ್(38) ಬಂಧಿತ ಆರೋಪಿ. ಫೆ.20ರಂದು ಬೆಳಗ್ಗೆ ಕೆ.ಎಚ್.ರಸ್ತೆಯ ನಿರ್ಮಾಣ ಹಂತದ ಕಟ್ಟಡದ ಕೆಳಗೆ ಸುಮಾರು 25 ವರ್ಷದ ಅಪರಿಚಿತ ಮಹಿಳೆಯ ಮೃತದೇಹ ಬಿದ್ದಿರುವ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸಂಪಂಗಿರಾಮನಗರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಅಸಹಜ ಸಾವು ಪ್ರಕರಣ ದಾಖಲಿಸಿದ್ದರು.

ಮೃತದೇಹದ ಮರಣೋತ್ತರ ಪರೀಕ್ಷೆ ವೇಳೆ ಅತ್ಯಾಚಾರ ಮಾಡಿ ಬಳಿಕ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಪ್ರಕರಣವನ್ನು ಭೇದಿಸಿ ಆರೋಪಿ ಆಟೋ ಚಾಲಕ ಮುಬಾರಕ್ ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಹಿನ್ನಲೆ:-
ಆರೋಪಿ ಮುಬಾರಕ್ ಫೆ.20ರಂದು ತಡರಾತ್ರಿ ಕೆ.ಆರ್.ಮಾರುಕಟ್ಟೆ ಬಳಿ ಅಪರಿಚಿತ ಮಹಿಳೆಯನ್ನು ಪರಿಚಯಿಸಿಕೊಂಡು ಆಟೋ ಹತ್ತಿಸಿಕೊಂಡಿದ್ದಾನೆ. ಬಳಿಕ ಸುಮಾರು ಎರಡು ತಾಸು ನಗರದ ವಿವಿಧೆಡೆ ಸುತ್ತಾಡಿಸಿ, ಸಂಪಂಗಿರಾಮನಗರ ಠಾಣಾ ವ್ಯಾಪ್ತಿಯ ಕೆ.ಎಚ್.ರಸ್ತೆಯ ನಿರ್ಜನಪ್ರದೇಶದ ನಿರ್ಮಾಣ ಹಂತದ ಕಟ್ಟಡದ 1ನೇ ಮಹಡಿಗೆ ಆ ಮಹಿಳೆಯನ್ನು ಕರೆದುಕೊಂಡು ಬಂದಿದ್ದಾನೆ. ಬಳಿಕ ಬಲವಂತವಾಗಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದು, ಬಳಿಕ ಆಕೆಯನ್ನು 1ನೇ ಮಹಡಿಯಿಂದ ಕೆಳಗೆ ನೂಗಿ ಪರಾರಿಯಾಗಿದ್ದಾನೆ. ತಲೆಗೆ ಗಂಭೀರ ಪೆಟ್ಟು ಬಿದ್ದು ಗಾಯಗೊಂಡಿದ್ದ ಮಹಿಳೆ ನರಳಾಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.