ಬೆಂಗಳೂರಿನ ನೀರಿನ ಅಭಾವ ನೀಗಿಸಲು ಕೊಳವೆಬಾವಿ ನೀರು ಪೂರೈಸುವ ಟ್ಯಾಂಕರ್​ಗಳು ಸರ್ಕಾರದ ಸುಪರ್ದಿಗೆ: ಡಿಕೆಶಿ.

34
firstsuddi

ಬೆಂಗಳೂರು: “ಬೆಂಗಳೂರಿನಲ್ಲಿ ನೀರಿನ ಅಭಾವ ನೀಗಿಸಲು ಕೊಳವೆಬಾವಿ ನೀರು ಪೂರೈಸುವ ಟ್ಯಾಂಕರ್​ಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸದಾಶಿವನಗರದ ಬಳಿ ಮಾತನಾಡಿದ ಅವರು, “ಬೆಂಗಳೂರಲ್ಲಿ ಕುಡಿವ ನೀರಿಗೆ ಹಾಹಾಕಾರ ಎದುರಾಗಿದೆ. ನಿತ್ಯ ಬಿಡಬ್ಲ್ಯೂಎಸ್ಎಸ್​ಬಿ ಹಾಗೂ ಪಾಲಿಕೆ ಅಧಿಕಾರಿಗಳು ಸಭೆ ಮಾಡುತ್ತಿದ್ದಾರೆ. ಕುಡಿವ ನೀರಿನ ದಂಧೆ ತಡೆಯಲು ಕೊಳವೆಬಾವಿ ಹಾಗೂ ಅವುಗಳಿಂದ ನೀರು ಪೂರೈಕೆ ಮಾಡುವ ಟ್ಯಾಂಕರ್​ಗಳು ಮಾ.7 ರ ಒಳಗಾಗಿ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೇವೆ” ಎಂದರು.

“ಕೊಳವೆ ಬಾವಿಗಳ ಮೂಲಕ ಬೆಂಗಳೂರಿನ ಕುಡಿಯುವ ನೀರಿನ ಅಭಾವ ನೀಗಿಸುತ್ತೇವೆ. ಈ ವಿಚಾರವಾಗಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ಕರೆಯಲಾಗಿದೆ. ಇನ್ನು ನನ್ನ ಇಲಾಖೆ ಅನುದಾನದಿಂದ ಬೆಂಗಳೂರಿನ ಎಲ್ಲ ಕ್ಷೇತ್ರಗಳ ಕುಡಿಯುವ ನೀರಿನ ಪೂರೈಕೆಗೆ ತಲಾ 10 ಕೋಟಿ ರೂ. ನೀಡಲಾಗಿದೆ” ಎಂದು ತಿಳಿಸಿದರು.