ಹಾಸನ: ಪ್ರೀತಿಸಲು ನಿರಾಕರಿಸಿದ್ದಕ್ಕೆ ಕತ್ತು ಸೀಳಿ ವಿದ್ಯಾರ್ಥಿನಿಯ ಹತ್ಯೆಗೈದ ಯುವಕನೋರ್ವ ಬಳಿಕ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.
ಭೂಮಿಕಾ ಕೊಲೆಯಾದ ವಿದ್ಯಾರ್ಥಿನಿ. ಈಕೆ ಬೆಳಗುಂಬ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ನಿನ್ನೆ ಸಂಜೆ ಶಾಲೆಯಿಂದ ವಾಪಸ್ ಮನೆಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿದ ಶರತ್ ಎಂಬಾತ ತನ್ನನ್ನು ಪ್ರೀತಿಸುವಂತೆ ಬಲವಂತ ಮಾಡಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ವಿದ್ಯಾರ್ಥಿನಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಇದಾದ ನಂತರ ಅರಸೀಕೆರೆ ತಾಲೂಕಿನ ಬಂಡಿಹಳ್ಳಿ ಬಳಿ ರೈಲಿಗೆ ತಲೆ ಕೊಟ್ಟು ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಘಟನಾ ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಈ ಕುರಿತು ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.