ಬೆಂಗಳೂರು: ಹೊಸ ವರ್ಷವನ್ನು ಸ್ವಾಗತಿಸಲು ಮತ್ತು ಆಚರಿಸಲು ಬೆಂಗಳೂರಿನಲ್ಲಿ ಭರ್ಜರಿ ಸಿದ್ಧತೆ ಮಾಡಲಾಗಿದೆ. ಎಂ.ಜಿ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ನಗರದ ಹಲವು ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ. ಹೀಗಾಗಿ ನಮ್ಮ ಮೆಟ್ರೋ ರೈಲು ಸೇವೆ ತಡರಾತ್ರಿ 2 ಗಂಟೆವರೆಗೂ ವಿಸ್ತರಿಸಲಾಗಿದ್ದು, ಇದೀಗ ಬಿಎಂಟಿಸಿ ಕೂಡ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಂಗಳೂರಿನ ವಿವಿಧ ಭಾಗಗಳಿಂದ ರಾತ್ರಿ 2 ಗಂಟೆಯವರೆಗೆ ಹೆಚ್ಚುವರಿ ಬಸ್ಸುಗಳು ಸಂಚಾರ ಮಾಡಲಿವೆ. ಎಂ.ಜಿ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಬಸ್ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. 13 ಸ್ಥಳಗಳಿಗೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಿರುವುದಾಗಿ ಬಿಎಂಟಿಸಿ ತಿಳಿಸಲಾಗಿದೆ. ರಾತ್ರಿ 11 ಗಂಟೆಯಿಂದ ರಾತ್ರಿ 2 ಗಂಟೆಯವರೆಗೆ ಹೆಚ್ಚುವರಿ ಬಸ್‍ಗಳ ಸೇವೆ ದೊರೆಯುತ್ತದೆ. ಎಂ.ಜಿ ರಸ್ತೆ, ಸರ್ಜಾಪುರ, ಬ್ರಿಗೇಡ್ ರಸ್ತೆ, ಕೆಂಗೇರಿ, ಎಲೆಕ್ಟ್ರಾನಿಕ್ ಸಿಟಿ, ಜನಪ್ರಿಯ ಟೌನ್‍ಶಿಪ್, ಜಿಗಣಿ, ಯಲಹಂಕ ಉಪನಗರ 5ನೇ ಹಂತ, ನೆಲಮಂಗಲ, ಚನ್ನಸಂದ್ರ, ಬಾಗಲೂರು, ಕಾಡುಗೋಡಿ, ಹೊಸಕೋಟೆ, ಬನಶಂಕರಿಗೆ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ. ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ, ಕೆ.ಆರ್.ಮಾರುಕಟ್ಟೆ, ಕಾಡುಗೋಡಿ, ಕೋರಮಂಗಲ, ಕೆಂಗೇರಿ, ಬನಶಂಕರಿ, ಸುಮನಹಳ್ಳಿ, ಯಶವಂತಪುರ, ಬನಶಂಕರಿ, ಹೆಬ್ಬಾಳ, ಗೊರಗುಂಟೆಪಾಳ್ಯ, ಶಾಂತಿನಗರ, ಯಲಹಂಕ, ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಮತ್ತು ನಮ್ಮ ಮೆಟ್ರೋ ಕೂಡ ಹೊಸ ವರ್ಷಾಚರಣೆಗೆ ಪ್ರಯಾಣಿಕರ ನಿರ್ವಹಣೆಗೆ ಒಂದಷ್ಟು ತಯಾರಿ ಮಾಡಿಕೊಂಡಿದೆ. ಸಂಭ್ರಮದಲ್ಲಿ ಮಧ್ಯಪಾನ ಮಾಡಿ ಹುಚ್ಚಾಟ ಆಡುವವರ ಬಗ್ಗೆಯೂ ಹದ್ದಿನ ಕಣ್ಣಿಡುವ ಮೂಲಕ ಅಂಥವರ ಆಟಾಟೋಪಕ್ಕೆ ಬ್ರೇಕ್ ಹಾಕಲು ಬೇಕಾದ ತಯಾರಿ ಮಾಡಿಕೊಂಡಿದೆ. ಇಂದು ರಾತ್ರಿ ಕುಡಿದು ಬರುವ ಪ್ರಯಾಣಿಕರಿಗೆ ಈ ಬಾರಿ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಬಿಎಂಆರ್‍ಸಿಎಲ್ ತಿಳಿಸಿದೆ. ಕುಡಿದು ಬಂದು ಮಹಿಳೆಯರ ಜೊತೆಗೆ ಕಿರಿಕ್ ಮಾಡಿದರೆ, 500 ರುಪಾಯಿ ದಂಡ ವಿಧಿಸುವುದಾಗಿ ಬಿಎಂಆರ್‍ಸಿಎಲ್ ತಿಳಿಸಲಾಗಿದೆ. ಮಹಿಳೆಯರಿಗೆ ತೊಂದರೆ ನೀಡಿದರೆ ಅಂಥವರನ್ನು ಪೋಲಿಸ್ ವಶಕ್ಕೆ ನೀಡಲಾಗುವುದು ಎಂದು ಮಾಹಿತಿ ತಿಳಿಸಿದೆ. ಇಂದು ರಾತ್ರಿ ಮಹಿಳೆಯರ ಸುರಕ್ಷತೆಗಾಗಿ ಪ್ರತಿ ಮೆಟ್ರೋ ಕೋಚ್‍ನಲ್ಲೂ ಮಹಿಳಾ ಸೆಕ್ಯುರಿಟಿ ಮತ್ತು ಪ್ಯಾಟ್ರೋಲ್ ಟೀಮ್ ನೇಮಕ ಮಾಡಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.










