ಶಿವಮೊಗ್ಗ: ಹೊಸ ವರ್ಷದ ಆಚರಣೆ ಮುಗಿಸಿ ಬೈಕ್‍ನಲ್ಲಿ ಹೊರಟಿದ್ದ 2 ಮಂದಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶಿವಮೊಗ್ಗದ ಎಂಕೆಕೆ ರಸ್ತೆಯಲ್ಲಿ ಸಂಭವಿಸಿದೆ. ಮೃತನ ಹೆಸರು ಸದ್ಯಕ್ಕೆ ತಿಳಿದುಬಂದಿಲ್ಲ. ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ. ಬೈಕ್‍ಗೆ ಡಿಕ್ಕಿ ಹೊಡೆದ ಕಾರು ಅಚ್ಚರಿ ರೀತಿಯಲ್ಲಿ ಪಲ್ಟಿಯಾಗಿದೆ. ಕಾರಿನಲ್ಲಿ 4 ಜನ ಪ್ರಯಾಣಿಸುತ್ತಿದ್ದು, ಅವರಿಗೆ ಯಾವುದೇ ಗಾಯಗಳಾದ ವರದಿ ಇಲ್ಲ. ಘಟನೆ ನಂತರ ಸ್ಥಳೀಯರು ಕಾರಿನಲ್ಲಿದ್ದ 4 ಜನರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟರಲ್ಲಿ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ತನಿಖೆ ನಡೆಸಿದರು. ಮೃತನ ಕುಟುಂಬಸ್ಥರು ದೂರು ನೀಡುವ ತಯಾರಿಯಲ್ಲಿದ್ದು, ಈ ಘಟನೆಯು ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.










