ಏಪ್ರಿಲ್ 16,17ಕ್ಕೆ ಸಿಇಟಿ ಪರೀಕ್ಷೆ: ಜ.23ರಿಂದ ಅರ್ಜಿ ಸಲ್ಲಿಕೆ ಆರಂಭ.

40

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪರೀಕ್ಷೆ ಬರೆಯಲು ಬಯಸುವ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಜ.23 ರಿಂದ ಫೆ.21ರ ತನಕ ಅರ್ಜಿ ಸಲ್ಲಿಕೆ ಮಾಡಿ ನೋಂದಣಿ ಮಾಡಿಕೊಳ್ಳಬಹುದು. ಇಂಜಿನಿಯರಿಂಗ್, ಪಶು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ನಿನ್ನೆ ಸಿಇಟಿ 2025ರ ವೇಳಾಪಟ್ಟಿಯನ್ನು ಘೋಷಣೆ ಮಾಡಿದರು. 2025ನೇ ಸಾಲಿನ ಸಿಇಟಿ ಪರೀಕ್ಷೆ ಏ.16, 17ರಂದು ನಡೆಯಲಿದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಸಚಿವ ಡಾ. ಎಂ.ಸಿ ಸುಧಾಕರ್ ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮ ಮತ್ತು ಫಾರ್ಮ-ಡಿ, ಕೃಷಿ ವಿಜ್ಞಾನ ಕೋರ್ಸ್ ಮತ್ತು ಬಿಎಸ್‍ಸಿ ನಸಿರ್ಂಗ್ ಕೋರ್ಸ್‍ಗಳ ಪ್ರವೇಶಕ್ಕೂ ಸಿಇಟಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಸಿಇಟಿ ಪರೀಕ್ಷೆಗೆ ಅರ್ಜಿಯು ಸಾಮಾನ್ಯವಾಗಿರುತ್ತದೆ. ಆದ್ದರಿಂದ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಪ್ರವೇಶಾತಿಗೂ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ನೋಂದಾಯಿಸಿಕೊಂಡು ಅರ್ಜಿ ಶುಲ್ಕ ಪಾವತಿ ಮಾಡಬೇಕು. ಬಿಪಿಒ, ಬಿಪಿಟಿ, ಬಿಎಸ್‍ಸಿ ಅಲೈಡ್, ಹೆಲ್ತ್‍ಸೈನ್ಸ್, ಆರ್ಕಿಟೆಕ್ಚರ್ ಕೋರ್ಸ್‍ಗಳ ಪ್ರವೇಶಾತಿಗೆ ಸಹ ಇದೇ ಅರ್ಜಿ ಅನ್ವಯವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.