ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣದಲ್ಲಿ ನನ್ನದಾಗಲಿ, ಸಿಎಂ ಪತ್ನಿ ಪಾರ್ವತಿಯವರದಾಗಲಿ ಪಾತ್ರ ಸೊನ್ನೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು. ಜಾರಿ ನಿರ್ದೇಶನಾಲಯದ ನೋಟಿಸ್‍ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಪಾತ್ರ ಇಲ್ಲ ಎಂದು ಒಪ್ಪಿಕೊಂಡು ಕೋರ್ಟ್ ತಡೆ ನೀಡಿದೆ. ವಿಚಾರಣೆ ಈಗ ಮುಂದಕ್ಕೆ ಹೋಗಿದ್ದು ಫೆಬ್ರವರಿ 10 ರ ಬಳಿಕ ನೋಡೋಣ ಎಂದು ಹೇಳಿದರು. ನಾನು ಮತ್ತು ಕಾಂಗ್ರೆಸ್ ಪಕ್ಷ ನ್ಯಾಯಾಂಗ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ. ನ್ಯಾಯಾಲಯದ ಆದೇಶವನ್ನು ನಾವು ಪಾಲಿಸುತ್ತೇವೆ. ಯಾಕೆ ನೋಟಿಸ್ ನೀಡಿದ್ದಾರೆ ಎಂಬುದಕ್ಕೆ ಇಡಿ ಮತ್ತು ಸಿಬಿಐ ಅವರನ್ನೇ ಕೇಳಬೇಕು ಎಂದು ಹೇಳಿದರು. ನನಗೆ ನೋಟಿಸ್ ಬಂದಾಗ ಅಚ್ಚರಿ ಆಯ್ತು. ಹಗರಣ ನಡೆದಾಗ ನಾನು ಮಂತ್ರಿ ಆಗಿರಲಿಲ್ಲ. ಸೈಟನ್ನು ಪಡೆದಿಲ್ಲ, ಕೊಟ್ಟಿಲ್ಲ. ಸೈಟ್ ಹಂಚಿಕೆ ಗೊಂದಲ ಆದ ಮೇಲೆ ಸೈಟ್ ವಾಪಸ್ ಕೂಡ ಕೊಟ್ಟಿದ್ದಾರೆ. ಇದೆಲ್ಲ ನ್ಯಾಯಮೂರ್ತಿಗಳಿಗೆ ಮನದಟ್ಟಾಗಿದೆ ಹಾಗಾಗಿ ಸ್ಟೇ ಕೊಟ್ಟಿದ್ದಾರೆ. ನನಗೆ ಕೊಟ್ಟಿರುವುದು ಒಂದೇ ನೋಟಿಸ್, ಮುಖ್ಯಮಂತ್ರಿ ಪತ್ನಿ ಪಾರ್ವತಿಯವರಿಗೆ ಎರಡನೇ ನೋಟಿಸ್ ಕೊಟ್ಟಿದ್ದಾರಾ ಎಂದು ನನಗೆ ತಿಳಿದಿಲ್ಲ ಎಂದು ಹೇಳಿದರು.









