ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಇದೀಗ ಶಾಲಾ ಮಕ್ಕಳಲ್ಲಿ ಚಿಕನ್ ಪಾಕ್ಸ್ ಆತಂಕ ಎದುರಾಗಿದೆ. ಜಿಲ್ಲೆಯ ಕಡಬ ಒಂದೇ ತಾಲೂಕಿನಲ್ಲಿ ವಿವಿಧ ಶಾಲೆಗಳಲ್ಲಿ 21ಕ್ಕೂ ಹೆಚ್ಚಿನ ಮಕ್ಕಳಿಗೆ ಚಿಕನ್‍ಪಾಕ್ಸ್ ಬಂದಿದೆ. ಆರೋಗ್ಯ ಇಲಾಖೆಯಿಂದ ದೊರೆತ ಮಾಹಿತಿ ಅನ್ವಯ ನೆಲ್ಯಾಡಿಯಲ್ಲಿ 2 ಶಾಲೆಗಳಲ್ಲಿ ಒಟ್ಟು 9 ಮಕ್ಕಳಿಗೆ, ಬೆಳ್ಳಾರೆ ಶಾಲೆಯಲ್ಲಿ 1, ಲಾವತ್ತಡ್ಕದಲ್ಲಿ 1, ಗೋಳಿತ್ತೊಟ್ಟುವಿನಲ್ಲಿ 1, ಕುಕ್ಕೆ ಸುಬ್ರಹ್ಮಣ್ಯದ ಶಾಲೆಯ ಆರು ಮಕ್ಕಳಿಗೆ ಸೇರಿದಂತೆ ಒಟ್ಟು 21 ಮಕ್ಕಳಿಗೆ ಚಿಕನ್‍ಪಾಕ್ಸ್ ಹರಡಿರುವ ಬಗ್ಗೆ ಪ್ರಸ್ತುತ ವರದಿ ಲಭ್ಯವಾಗಿದೆ. ರೋಗ ಹರಡಿರುವ ಶಾಲೆಗಳ ಆಡಳಿತ ಮಂಡಳಿಗೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಆದೇಶ ನೀಡಿದೆ. ರೋಗ ಕಡಿಮೆಯಾಗುವವರೆಗೂ ಮಕ್ಕಳಿಗೆ ರಜೆ ನೀಡುವಂತೆ ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸದಂತೇ ಶಾಲೆಗಳಿಗೆ ಮತ್ತು ಪೋಷಕರಿಗೆ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.










