ಬಳ್ಳಾರಿ : ಹಂಪಿ ಉತ್ಸವದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಟ ದಿಗಂತ್, ನಟಿ ಐಂದ್ರಿತಾ ರೈ ಮತ್ತಷ್ಟು ಮೆರಗು ತಂದರು. ಹಂಪಿಯ ಎರಡನೇ ವೇದಿಕೆಯಲ್ಲಿ ನಡೆದ ಫ್ಯಾಷನ್ ಶೋ, ರ್ಯಾಂಪ್ ವಾಕ್ ಗೆ ಚಾಲನೆ ನೀಡಿದ ನಟ, ನಟಿಯರು ನೆರೆದ ಜನರಲ್ಲಿ ಹುಮ್ಮಸ್ಸು ತುಂಬಿದರು. ೨೧ ಜನ ವಿಶ್ವಸುಂದರಿಯರು ( ಆಯಾ ದೇಶದ ರೂಪದರ್ಶಿಗಳು) ರ್ಯಾಂಪ್ ವಾಕ್ ಮಾಡಲು ಹಂಪಿಗೆ ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ನಟ, ದಿಗಂತ್, ನಟಿ ಐಂದ್ರಿತಾ ರೈ ಚಾಲನೆ ನೀಡಿ, ರ್ಯಾಂಪ್ ವಾಕ್ ಮಾಡಿ ತಾವು ಹೆಜ್ಜೆ ಹಾಕಿದರು.
ನಟಿ ಐಂದ್ರಿತಾ ರೈ ಮೊದಲು ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಶಿಳ್ಳೆ ಚಪ್ಪಾಳೆ, ಕೇಕೆ ಹಾಕಿದ ಹಂಪಿ ಹೈಕ್ಳು ನಟಿಯ ರ್ಯಾಂಪ್ ವಾಕ್ ಕಣ್ತುಂಬಿಕೊಂಡರು. ಇನ್ನೂ ದೂದ್ ಪೇಡ ಎಂದೇ ಖ್ಯಾತಿ ಹೊಂದಿದ ನಟ ದಿಗಂತ್ , ನಟಿ ರೈ ಜತೆ ಹೆಜ್ಜೆ ಹಾಕಿ, ೨೧ ದೇಶದ ವಿಶ್ವ ಸುಂದರಿಯರಿಗೆ ಸಾಥ್ ನೀಡಿದರು. ಎರಡನೇ ದಿನದ ವೇದಿಕೆಯಲ್ಲಿ ನಡೆದ ರ್ಯಾಂಪ್ ವಾಕ್ ನೆರೆದ ಜನರಲ್ಲಿ ಉತ್ಸಾಹ ತುಂಬಿದರೆ, ನೋಡಲು ಬಂದಿದ್ದ ಹುಡುಗಿಯರು ನಾವೂ ಕೂಡ ಆ ಥರ ಮಾಡಬೇಕೆಂಬ ಆಸೆಯನ್ನು ಕಣ್ತುಂಬಿಕೊಂಡರು. ಇನ್ನೂ ಹಂಪಿಗೆ ಬಂದಿದ್ದ ಪ್ರವಾಸಿಗರು ಸುತ್ತಲಿನ ಹಳ್ಳಿಗಳ ಜನರು, ರ್ಯಾಂಪ್ ವಾಕ್ ಎಲ್ಲೋ ಟಿವಿಯಲ್ಲಿ ನೋಡುವುದಕ್ಕೆ ಆಗುತ್ತಿತ್ತು. ಈಗ ನೇರವಾಗಿಯೇ ನೋಡುವ ಅವಕಾಶ ಸಿಕ್ತಲ್ಲ ಎಂದು ಆಸೆಗಣ್ಣಿನಿಂದ ನೋಡಿದರು. ನೆರೆದ ಪಡ್ಡೆಹುಡುಗರಿಗೆ ರ್ಯಾಂಪ್ ವಾಕ್ ನಿದ್ದೆಗೆಡಿಸಿದ್ದಂತೂ ಸತ್ಯ.