ಕಡೂರು : ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ಭಾರತ ದೇಶದ ಅಪ್ರತಿಮ ಶಕ್ತಿ ಹಾಗೂ ವಿಶ್ವ ಕಂಡ ಅದ್ಭುತ ಮಾನವತಾವಾದಿ. ಆಧುನಿಕ ಭಾರತದ ಸಾಮಾಜಿಕ ಕ್ರಾಂತಿಯ ಹರಿಕಾರನಾಗಿ, ಧಮನಿತರ ಧ್ವನಿಯಾಗಿ, ಅಂಬೇಡ್ಕರ್ ಜಗತ್ತಿಗೆ ಮಾದರಿಯಾಗಿದ್ದಾರೆ ಎಂದು ಸಾಹಿತಿ ಹಾಗೂ ಪ್ರಾಂಶುಪಾಲ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.
ನಗರದ ಹೈವೇ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಡಾ|| ಬಿ.ಅರ್. ಅಂಬೇಡ್ಕರ್‍ರವರ 127ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯೋಗೀಶ್ ಸಹ್ಯಾದ್ರಿ, ಬಾಲ್ಯದಲ್ಲಿ ಅನುಭವಿಸಿದ ಬಡತನ ಹಾಗೂ ಅವಮಾನಗಳನ್ನು ಛಲದಿಂದ ಎದುರಿಸಿದ ಅಂಬೇಡ್ಕರ್‍ರವರು ಭವ್ಯ ಭಾರತದ ಕನಸು ಕಂಡಿದ್ದರು. ಸ್ವತಂತ್ರ್ಯ ಭಾರತದ ಮೊದಲ ಕಾನೂನು ಮಂತ್ರಿಯಾಗಿ ಅಸಮಾನತೆಯ ವಿರುದ್ಧ ಹೋರಾಡಿ, ವಿಶ್ವ ಮೆಚ್ಚಿದ ಅತ್ಯುತ್ತಮ ಸಂವಿಧಾನವನ್ನು ದೇಶಕ್ಕೆ ನೀಡಿದವರು. ಅವರು ರಚಿಸಿದ “ನೋ ಪಿಯೂನ್, ನೋ ವಾಟರ್” ಎಂಬ ಪುಸ್ತಕದಲ್ಲಿ ತಾವು ಶಾಲೆಯ ದಿನಗಳಲ್ಲಿ ಅನುಭವಿಸಿದ ನೋವುಗಳನ್ನು ಅತ್ಯಂತ ಬೇಸರದಿಂದ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಕೊಲಂಬಿಯ ವಿಶ್ವವಿದ್ಯಾಲಯ ಹಾಗೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ಪದವಿಗಳನ್ನು ಪಡೆದು, ಹಿಂದುಳಿದ ವರ್ಗದ ಯುವಕರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದರು. ತಮ್ಮ ವಿದ್ವತ್ತು ಬರವಣಿಗೆಯ ಮೂಲಕ ಜಾತಿ ವ್ಯವಸ್ಥೆಯನ್ನು ಸದೆಬಡೆಯುವ ಪ್ರಾಮಾಣಿಕ ಪ್ರಯತ್ನ ಮಾಡಿ ಭಾರತರತ್ನ ಬಿರುದು ಪಡೆದು ದೇಶದ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ಮೇಧಾವಿ, ರಾಷ್ಟ್ರನಾಯಕ ಡಾ|| ಬಿ.ಆರ್. ಅಂಬೇಡ್ಕರ್ ಎಂದು ಹೇಳಿದರು.
ಕಡೂರು ಅಕಾಡೆಮಿ ಆಫ್ ಎಜುಕೇಷನ್ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್. ಬಿ.ಎಸ್. ರವರು ಮಾತನಾಡಿ ಅಂಬೇಡ್ಕರ್‍ರವರ ಚಿಂತನೆಯ ಫಲವಾಗಿ ಮೂಡಿದ ಸಂವಿಧಾನ ಬಹುಜನಾಂಗೀಯ ಭಾರತದಲ್ಲಿ ಸಮಾನತೆ ತರಲು ಸಹಕಾರಿಯಾಗಿದೆ. ಅಂಬೇಡ್ಕರ್ ಜಯಂತಿ ಹಾಗೂ ಗಾಂಧಿ ಜಯಂತಿಯಂತಹ ಹಬ್ಬಗಳು ನಾಗರೀಕರಲ್ಲಿ ರಾಷ್ಟ್ರೀಯತೆಯ ಭಾವನೆ ಮೂಡಿಸುವಲ್ಲಿ ಸಹಕಾರಿಯಾಗುತ್ತದೆ. ಅಂಬೇಡ್ಕರ್‍ರವರ ಜೀವನ, ಶಿಕ್ಷಣ, ಸಂಘಟನಾ ಮನೋಭಾವ ಇತರರಿಗೆ ಮಾದರಿಯಾಗುವಂತಹದು. ಶ್ರೇಷ್ಠ ಚಿಂತಕರಾದ ಅವರು ಬುದ್ಧ, ಜಾನ್‍ಡೆವಿ, ಕಬೀರ್‍ನಾಥ್, ರಾನಡೆ ಮುಂತಾದವರಿಂದ ಪ್ರಭಾವಿತಗೊಂಡು ದೇಶಕ್ಕೆ ಉತ್ತಮ ಮಾರ್ಗ ತೋರಿದವರು ಎಂದು ನುಡಿದರು.
ಶಾಲೆಯ ಸಹಶಿಕ್ಷಕ ಮಂಜುನಾಥ್ ಅಂಬೇಡ್ಕರ್ ಜೀವನ ಮತ್ತು ಸಂವಿಧಾನ ರಚನೆಯಲ್ಲಿ ಅವರು ಪಟ್ಟ ಶ್ರಮದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಹೈವೇ ಸಂಸ್ಥೆಯ ಕಾರ್ಯದರ್ಶಿ ಜತನ್‍ಲಾಲ್ ಡಾಗ, ಖಜಾಂಚಿ ಜಿ. ರಂಗರಾವ್, ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು, ಶಿಕ್ಷಕಿ ರೋಜಿಪನ್ನ ಕಾರ್ಯಕ್ರಮ ನಿರೂಪಿಸಿದರು.