ಚಿಕ್ಕಮಗಳೂರು : ಚುನಾವಣೆಯಲ್ಲಿ ಮತ ಚಲಾಯಿಸಲು ಬಳಸಲಾಗುವ ವಿದ್ಯುನ್ಮಾನ ಯಂತ್ರ ವಿ.ವಿ.ಪ್ಯಾಟ್ ಯಂತ್ರದ ತಂತ್ರಜ್ಞಾನ ಕುರಿತು ವಕೀಲರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇಂದು ನಗರದ ನ್ಯಾಯಾಲಯ ಸಂಕೀರ್ಣದಲ್ಲಿರುವ ವಕೀಲರ ಸಂಘದ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಈ ಸಂಧರ್ಭದಲ್ಲಿ ಮಾತನಾಡಿ ಈ ಬಾರಿಯ ಚುನಾವಣೆಯಲ್ಲಿ ವಿದ್ಯುನ್ಮಾನ ಯಂತ್ರದ ಜೊತೆಯಲ್ಲಿ ವಿ.ವಿ.ಪ್ಯಾಟ್ ಯಂತ್ರದ ತಂತ್ರಜ್ಞಾನದ ಸಹಾಯದೊಂದಿಗೆ ಮತ ಚಲಾಯಿಸಿದ ನಂತರ ಮುದ್ರಿತ ರೂಪದ ದಾಖಲೆಯನ್ನು ಸಾರ್ವಜನಿಕರು ಮತದಾನ ಮಾಡಿದ ನಂತರ ನೋಡಬಹುದಾಗಿದೆ ಎಂದರು.
ಮುದ್ರಿತ ರೂಪದ ದಾಖಲೆಯನ್ನು ವಿ.ವಿ.ಪ್ಯಾಟ್‌ನ ಕಿಂಡಿಯಲಿ ಏಳು ಸೆಕೆಂಡ್‌ಗಳ ಕಾಲ ವೀಕ್ಷಿಸಲು ಅವಕಾಶವಿದೆ ಎಂದ ಅವರು ವಿ.ವಿ.ಪ್ಯಾಟ್‌ನಲ್ಲಿ ಶೇಕರಣೆಗೊಂಡಿರುವ ಮುದ್ರಿತ ದಾಖಲೆ ಚೀಟಿಗಳನ್ನು ಮತ ಎಣಿಕೆಯ ದಿನದಂದು ವಿಧಾನಸಭಾ ಕ್ಷೇತ್ರದ ಒಂದು ಆಯ್ದ ಮತಗಟ್ಟೆಯ ವಿ.ವಿ.ಪ್ಯಾಟ್‌ನಲ್ಲಿ ಇರುವ ದಾಖಲೆ ರೂಪದ ಚೀಟಿಗಳನ್ನು ಎಣಿಸಲು ಅವಕಾಶ ನೀಡಲಾಗುವುದು ಎಂದರು. ಸಂವಿಧಾನಿಕವಾಗಿ ನೀಡಿರುವ ಮತವನ್ನು ಪ್ರತಿಯೊಬ್ಬರು ಮೇ ೧೨ರಂದು ನಡೆಯಲಿರುವ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಬೇಕೆಂದ ಅವರು ವಿಕಲಚೇತನ ಮತದಾರರಿಗೆ ವೀಲ್ ಚೇರ್ ವ್ಯವಸ್ಥೆ ಹಾಗೂ ಅಂಧ ಮತದಾರರಿಗೆ ಬ್ರೈಲ್ ಲಿಪಿ ಇರುವ ಮತ ಯಂತ್ರವನ್ನು ಕಲ್ಪಿಸಿಕೊಡಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷೆ ಸಿ.ಸತ್ಯಭಾಮ ಮಾತನಾಡಿ ಭಾರತದಲ್ಲಿ ವಿದ್ಯುನ್ಮಾನ ಮತ ಯಂತ್ರವನ್ನು ಬೆಂಗಳೂರಿನ ಬಿ.ಇ.ಎಲ್ ಸಂಸ್ಥೆ ತಯಾರಿಸುತ್ತಿದ್ದು ತಂತ್ರಜ್ಞಾನದ ಅಭಿವೃದ್ಧಿಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು ಈ ಸಮಿತಿಯು ನೀಡುವ ಸಲಹೆ ಸೂಚನೆಗಳ ಆಧಾರದ ಮೇಲೆ ತಂತ್ರಜ್ಞಾನವನ್ನು ಅಭಿವೃಧ್ದಿಪಡಿಸಲಾಗಿದೆ ಎಂದರು. ಅಲ್ಲದೆ ಮತ ಯಂತ್ರದ ಮಾಹಿತಿಯನ್ನು ಬೇರೆ ಯಾವುದೇ ತಂತ್ರಜ್ಞಾನದಿಂದ ಹೊರ ಜಗತ್ತಿಗೆ ಸಂಪರ್ಕ ಇರುವುದಿಲ್ಲ ಎಂದರು.
ಪ್ರತಿಯೊಂದು ಮತವು ಅಮೂಲ್ಯವಾಗಿದ್ದು ತಮ್ಮ ಅಭಿಪ್ರಾಯಗಳನ್ನು ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದರು. ಈ ಬಾರಿಯ ವೋಟಿಂಗ್ ಬ್ಯಾಲೆಟ್ ಯೂನಿಟ್‌ನಲ್ಲಿ ಅಭ್ಯರ್ಥಿಯ ಹೆಸರು, ಭಾವ ಚಿತ್ರ ಹಾಗೂ ಚಿಹ್ನೆಗಳನ್ನು ಅಳವಡಿಸಿರುತ್ತಾರೆ ಎಂದ ಅವರು ಮತದಾನ ಖಾತ್ರಿ ಪಡಿಸುವ ಯಂತ್ರವನ್ನು ವೋಟ್ ಮಾಡುವ ಟೇಬಲ್ ಬಳಿ ಅಳವಡಿಸಿರುತ್ತಾರೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಗಂಟಿ, ಜಿಲ್ಲಾ ಆಯುಶ್ ಅಧಿಕಾರಿ ಗೀತಾ, ವಕೀಲರ ಸಂಘದ ಅಧ್ಯಕ್ಷ ಬಿ.ಟಿ.ದುಶ್ಯಂತ್, ಕಾರ್ಯದರ್ಶಿ ರಾಜೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.