ಚಿಕ್ಕಮಗಳೂರು : ಪರಿಶಿಷ್ಠಜಾತಿ/ಪರಿಶಿಷ್ಠ ಪಂಗಡಗಳ ದೌರ್ಜನ್ಯ ಕಾಯ್ದೆ ಕುರಿತು ನೀಡಿರುವ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಅಪರ ಜಿಲ್ಲಾಧಿಕಾರಿ ಕುಮಾರ್ ಅವರನ್ನು ಬುಧವಾರ ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಪ.ಜಾತಿ/ಪ.ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯನ್ನು ತಿದ್ದುಪಡಿ ಮಾಡಿದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಇನ್ನಷ್ಟು ಹೆಚ್ಚುತ್ತವೆ, ದೌರ್ಜನ್ಯ ನಡೆಸುವವರಿಗೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಅವಕಾಶವಾಗುತ್ತದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕು, ತೀರ್ಪಿನ ಹಿನ್ನೆಲೆಯಲ್ಲಿ ದೇಶಾದ್ಯಂತ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ರೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ದಲಿತ ಅಧಿಕಾರಿಗಳ ಹಿಂಬಡ್ತಿ ಆದೇಶವನ್ನೂ ಮರುಪರಿಶೀಲಿಸಲು ಕೇಂದ್ರ ಸರ್ಕಾರ ಮನವಿ ಸಲ್ಲಿಸಬೇಕು, ಉತ್ತರಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಎಲ್.ಎಸ್.ಶ್ರೀಕಾಂತ್, ವಿಭಾಗೀಯ ಸಂಚಾಲಕ ಟಿ.ಮಂಜಪ್ಪ, ಜಿಲ್ಲಾ ಖಜಾಂಚಿ ಲಕ್ಷ್ಮಣ್, ಕಡೂರು ತಾಲ್ಲೂಕು ಸಂಚಾಲಕ ಶಿವಸ್ವಾಮಿ, ಸೋಮಶೇಖರ್ ಹಾಜರಿದ್ದರು.