ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಜನರು ತಪ್ಪದೆ ಮತದಾನ ಮಾಡಬೇಕು

471

ಚಿಕ್ಕಮಗಳೂರು : ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ನಿಟ್ಟಿನಲ್ಲಿ ಜನತೆ ತಪ್ಪದೆ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಕರೆ ನೀಡಿದರು. ನಗರದ ತಾಲ್ಲೂಕು ಕಛೇರಿ ಅವರಣದಲ್ಲಿ  ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ ಯೋಜನೆ ಅಂಗವಾಗಿ ಮತದಾರರ ಜಾಗೃತಿ ಜಾಥ ಹಾಗೂ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು

ಜಾಗೃತ ಮತದಾನದಿಂದ ನಾವು ಸುಭದ್ರ ಸರ್ಕಾರವನ್ನು ಪಡೆಯಲು ಸಾಧ್ಯ, ಮತದಾನ ಮಾಡುವುದು ನಮ್ಮ ಹಕ್ಕು ಹಾಗೂ ಕರ್ತವ್ಯವಾಗಿದೆ ಎಂದ ಅವರು ಪ್ರತಿಯೊಬ್ಬ ನಾಗರೀಕರು ಮೇ ೧೨ ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾವಣೆ ಮಾಡಬೇಕೆಂದು ಮನವಿ ಮಾಡಿದರು. ಏಪ್ರಿಲ್ ೧೪ ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಅವಕಾಶವಿದ್ದು ಅಷ್ಟರೊಳಗೆ ಸಾರ್ವಜನಿಕರು ಮತಗೆಟೆ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ದಾಖಲೆಗಳನ್ನು ನೀಡಿ ನೊಂದಾಯಿಸಿಕೊಳ್ಳಬಹುದಾಗಿದೆ  ಎಂದರು.

ಚುನಾವಣೆ ಕೆಲಸ ಕಾರ್ಯಗಳಿಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪೋಸ್ಟಲ್ ಬ್ಯಾಲೆಟ್ ಅಥವಾ ಇ.ಡಿ.ಸಿ ಯನ್ನು ಪಡೆದು ಮತಚಲಾವಣೆ ಮಾಡಬೇಕೆಂದರು. ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷೆ ಸಿ ಸತ್ಯಭಾಮ ಮಾತನಾಡಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ಭಾರತ ದೇಶದಲ್ಲಿ ಜನತೆಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾನ ಒಂದು ಉತ್ತಮ ವ್ಯವಸ್ಥೆಯಾಗಿದೆ ಮತದಾರರ ಪಟ್ಟಿಯಲ್ಲಿರುವ ಎಲ್ಲರು ಮತ ಚಲಾಯಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್, ಆರೋಗ್ಯ ಮತ್ತು ಕುಂಟುಂಬ ಕಲ್ಯಾಣಾಧಿಕಾರಿ ಮಲ್ಲಿಕಾರ್ಜನ್, ಆಯುಷ್ ಅಧಿಕಾರಿ ಗೀತಾ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮ್ ಮತ್ತಿತರರು ಉಪಸ್ಥಿತರಿದ್ದರು.