ಡಾ.ಎಂ.ಎಸ್.ಮಣಿ
ಕಳೆದ ಮಾಸ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಯಿತು. ಇದೊಂದು ಸಹಜ ಪ್ರಕ್ರಿಯೆ ಆಗಿದ್ದರೆ ಮರೆಯಬಹುದಿತ್ತು. ಕಳವಳ ಪಡುವ ಅಗತ್ಯವಿರಲಿಲ್ಲ. ಮಂತ್ರಿ ಸ್ಥಾನ ಸಿಗದ ಶಾಸಕರಿಬ್ಬರ ಪುತ್ರಿಯರು ತಮ್ಮ ತಂದೆಗೇಕೆ ಮಂತ್ರಿ ಪದವಿ ನೀಡಿಲ್ಲ ಎಂದು ದೃಶ್ಯ ಮಾಧ್ಯಮಗಳ ಮುಂದೆ ಬಂದಿದ್ದರು. ಇವರಲ್ಲಿ ಒಬ್ಬರು ಶಾಸಕಿಯಾಗಿ ಆರು ತಿಂಗಳು ಕಳೆದಿಲ್ಲ. ಆಗಲೇ ಅಸಮಾಧಾನ ಸ್ಪೋಟಿಸಿದ್ದಾರೆ. ಇವರ ತಂದೆ ಮೆದುಭಾಷಿ, ಸರಳಜೀವಿ. ಯಾರ ಮನಸ್ಸನ್ನೂ ನೋಯಿಸದೆ ರಾಜಕಾರಣ ಮಾಡಿಕೊಂಡು ಬಂದವರು. ಒಂಥರ ಅಜಾತಶತ್ರು. ಆದರೆ, ಮಗಳು ಮಂತ್ರಿ ಪದವಿ ಕೊಡಬೇಕೆಂಬ ಹಠ ಹಿಡಿದು ಕೂತು, ಅವರ ತಂದೆಯ ರಾಜಕಾರಣಕ್ಕೊಂದು ಮಸಿ ಬಳಿದುಬಿಟ್ಟರು. ಮಗಳ ಅವಲತ್ತು ಕಂಡು, ಭಿನ್ನ ಧ್ವನಿ ಹೊರಡಿಸಿದ ತಂದೆ ಕೂಡ ಪ್ರಚೋದನೆಗೆ ಒಳಗಾಗಿ ಮಾಧ್ಯಮದ ಮುಂದೆ ಬಂದುಬಿಟ್ಟರು. ರಾಜಕಾರಣದ ಗಂಧ ಗಾಳಿಯ ಅರಿವಿಲ್ಲದ ಉತ್ತರ ಕರ್ನಾಟಕ ಜಿಲ್ಲೆಯ ಶಾಸಕರೊಬ್ಬರ ಪುತ್ರಿ ತಮ್ಮ ತಂದೆಗೇಕೆ ಮಂತ್ರಿ ಮಾಡಬೇಕೆಂದು ಮಾಧ್ಯಮಗಳ ಮುಂದೆ ವಾದ ಮಂಡಿಸಿದ್ದರು. ಇನ್ನೊಂದು ಕಡೆ ಮಂತ್ರಿಯಾಗಲೇಬೇಕೆಂದು ಹಠ ಹಿಡಿದು ಮಂತ್ರಿಯಾದವರು. ಜಲಸಂಪನ್ಮೂಲ ಇಲಾಖೆಯೇ ಬೇಕೆಂದು ಪಟ್ಟು ಹಿಡಿದಿದ್ದರು. ಇನ್ನೊಬ್ಬರು ತನ್ನನ್ನು ಬಿಟ್ಟು ತನ್ನ ತಮ್ಮನನ್ನು ಮಂತ್ರಿ ಮಾಡಲಾಗಿದೆ ಎಂದು ಕೋಪಿಸಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗಡುವು ನೀಡಿದ್ದಾರೆ. ಮತ್ತೊಬ್ಬರು ಮಂತ್ರಿ ಸ್ಥಾನ ಕೊಡಿ ಎಂದು ಭಿಕ್ಷೆ ಬೇಡುವುದಿಲ್ಲ, ಅದಕ್ಕಿಂತಲೂ ಹೆಚ್ಚಾಗಿ ಬದುಕುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ. ಕೇಂದ್ರದ ನಾಯಕರೊಬ್ಬರು ಒಬ್ಬ ಮುಖ್ಯಮಂತ್ರಿಯನ್ನೇ ಆಯ್ಕೆ ಮಾಡಿಸುವಷ್ಟು ಸಮರ್ಥರಿದ್ದಾರೆ. ಇವರು ನಾನು ಹೇಳಿದವರಿಗೆ ಮಂತ್ರಿ ಮಾಡಿರುವುದಿಲ್ಲ ಎಂದು ಗದ್ಗಧಿತರಾಗಿದ್ದಾರೆ.
ಇವೆಲ್ಲವನ್ನೂ ಕಂಡಾಗ ’ಕುಟುಂಬ ರಾಜಕಾರಣ’, ’ಓಲೈಕೆ ರಾಜಕಾರಣ’, ’ವಾರಸುದಾರಿಕೆ ರಾಜಕಾರಣ’ ಎಲ್ಲಿ ನಮ್ಮ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ದೂಡಿಬಿಡುವುದೋ ಎಂಬ ಚಿಂತೆ ಕಾಡುತ್ತದೆ. ಪ್ರಜಾಪ್ರಭುತ್ವದಡಿ ಸಿಕ್ಕ ಅಧಿಕಾರವನ್ನು ನಮ್ಮ ರಾಜಕಾರಣಿಗಳು ಅರಸೊತ್ತಿಗೆಯೆಂದೇ ಭಾವಿಸಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಲೋಹಿಯಾ ಅವರುಗಳು ಕಂಡ ಪ್ರಜಾಪ್ರಭುತ್ವದ ಆಶಯ ಇದೇನಾ? ಎಂಬ ದುಃಖವಾಗುತ್ತದೆ. ಪ್ರಜಾಪ್ರಭುತ್ವ ಉಳಿಸಲು ಪ್ರಜ್ಞಾವಂತರೆಲ್ಲರೂ ಧ್ವನಿ ಎತ್ತಬೇಕಾದ ಕಾಲವೂ ಇದಾಗಿದೆ. ಇತ್ತೀಚೆಗೆ ನಮ್ಮ ಗುಂಪಿನಲ್ಲಿ ವಂಶಾಡಳಿತದ ವಿರುದ್ಧ ಸಣ್ಣದೊಂದು ಚರ್ಚೆ ನಡೆಯಿತು. ಚರ್ಚೆಯಲ್ಲಿ ಹಿರಿಯ ಪತ್ರಕರ್ತರಾದ ಲಕ್ಷ್ಮಣ ಕೊಡಸೆಯವರು ಭಾಗವಹಿಸಿದ್ದರು. ಒಂದಿಬ್ಬರು ಬಿಟ್ಟರೆ ಉಳಿದವರಿಗೆ ಅದೆಂತಹದ್ದೋ ನಿರಾಸಕ್ತಿ. ವಂಶಾಡಳಿತ ಸಾಮಾನ್ಯ ಸಂಗತಿ. ಅಧಿಕಾರ ಹಸ್ತಾಂತರ ಕುಟುಂಬದ ಆಸ್ತಿ ವರ್ಗಾಯಿಸಿದಂತೆ ಎಂಬಷ್ಟು ಸಹಜವಾಗಿ ತೆಗೆದುಕೊಂಡ ಗುಂಪಿನ ಸದಸ್ಯರ ಬಗ್ಗೆ ಬೇಸರವೂ ಇದೆ. ಮರುಕವೂ ಇದೆ. ಇವರ ಮಧ್ಯೆ ಹಿರಿಯ ಪತ್ರಕರ್ತರಾದ ಲಕ್ಷ್ಮಣ ಕೊಡಸೆಯವರು ಬೆಳಕಿನ ಗೆರೆ ಇದ್ದಂತೆ. ಬಂಡಾಯ ಬಿತ್ತಲು, ಜಾಗೃತಿ ಮೂಡಿಸಲು ಇವರು ಬಳಸುವ ತೀಕ್ಷ್ಣ ನುಡಿಗಳು ನನ್ನಂತಹ ಅದೆಷ್ಟೋ ಜನರನ್ನು ಎಚ್ಚರಿಸಿ ಚಿಂತಿಸುವಂತೆ ಮಾಡಿದೆ. ಬರೆಯುವಂತೆಯೂ ಮಾಡಿದೆ. ಇರಲಿ, ಭಾರತದ ರಾಜಕೀಯ ಪಕ್ಷಗಳು ಪ್ರಜಾಸತ್ತಾತ್ಮಕವಾಗಿವೆಯೇ? ಇವು ಪ್ರಜಾಪ್ರಭುತ್ವದ ಮಂತ್ರ ಜಪಿಸಿದರೂ ಇವುಗಳ ಕಾರ್ಯವೈಖರಿ ಕಂಡಾಗ ಈ ಪಕ್ಷಗಳ ಧೋರಣೆ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಕನ್ಯಾಕುಮಾರಿಯಿಂದ ಹಿಡಿದು, ಕಾಶ್ಮೀರದವರೆಗೂ ಪ್ರಜಾಪ್ರಭುತ್ವವಾದಿ ಯಾವ ರೀತಿ ವಂಶಾಡಳಿತಕ್ಕೆ ಸಿಲುಕಿದೆ ಎಂಬುದನ್ನು ಕಂಡಾಗ ನೋವಾಗುತ್ತದೆ.
ಕರ್ನಾಟಕದ ರಾಜಕಾರಣದಲ್ಲಿ ಮೊದಲಿಗೆ ಎದ್ದು ನಿಲ್ಲುವುದು ದೇವೇಗೌಡ ಅವರ ಕುಟುಂಬ ವರ್ಗ. ದೇವೇ ಗೌಡರು ಹಾಸನ ಜಿಲ್ಲೆ, ಹೊಳೆನರಸಿಪುರ ತಾಲ್ಲೂಕಿನ ಹರದನ ಹಳ್ಳಿ ಗ್ರಾಮದವರು. ಡಿಪ್ಲೊಮಾ ಪಡೆದು ಗುತ್ತಿಗೆದಾರರಾಗಬೇಕಿದ್ದ ದೇವೇಗೌಡರು ದೇಶ ಆಳಿದ್ದು ಇತಿಹಾಸ. ಪ್ರಧಾನಿ ಪಟ್ಟಕ್ಕೇರಿದ ಏಕೈಕ ಕನ್ನಡಿಗ ದೇವೆಗೌಡರು. ಇದೊಂದು ಹೆಮ್ಮೆಯ ಸಂಗತಿ ಕೂಡ. ವಿ.ಪಿ. ಸಿಂಗ್ ಅವರು ಮಂಡಲ್ ವರದಿ ಜಾರಿಗೆ ಮುಂದಾಗಿದ್ದರಿಂದ ದೇಶಾದ್ಯಂತ ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರು ದಶಕಗಳ ನಿದ್ದೆಯಿಂದ ಎದ್ದುಕೂತಿದ್ದರು. ಬ್ರಾಹ್ಮಣರೇತರರೆಲ್ಲ ಒಂದಾಗಬೇಕೆಂಬ ಮನೋಭಾವನೆ ಮೂಡಿಸಿಕೊಂಡಿದ್ದರು. ಅವಕಾಶ ವಂಚಿತರೆಲ್ಲರೂ ಕೂಡಿ ರಾಜಕೀಯ ಅಧಿಕಾರ ಹಿಡಿಯಲೇಬೇಕೆಂಬ ಜಿದ್ದಿಗೆ ಬಿದ್ದಿದ್ದರು. ಹೀಗಾಗಿ ತಮ್ಮ ತಮ್ಮಲ್ಲಿದ್ದ ವೈಮನಸ್ಸತ್ವ ಮರೆತು ಅಧಿಕಾರ ಹಿಡಿಯಲು ಕಾದು ಕೂತಿದ್ದರು. ಜೊತೆಗೆ ಪ್ರಾದೇಶಿಕ ಪಕ್ಷಗಳೆಲ್ಲವೂ ಕೈಜೋಡಿದ್ದವು. ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷಗಳೂ ಕೂಡ ಬೆಂಬಲಿಸಿದ್ದವು. ಆಗ ಹಿಂದುಳಿದ ವರ್ಗಕ್ಕೆ ಸೇರಿದ ದೇವೇಗೌಡರನ್ನು ಲಾಲೂ, ಮುಲಾಯಂ, ಜ್ಯೋತಿಬಸು, ಐ.ಕೆ. ಗುಜ್ರಾಲ್, ರಾಮ್ ವಿಲಾಸ್ ಪಾಸ್ವಾನ್ ಅವರುಗಳೆಲ್ಲರೂ ಪ್ರಧಾನಿ ಕುರ್ಚಿಯಲ್ಲಿ ಕೂರಿಸಿದರು. ಯಾವುದೇ ಕಳಂಕ ಮೆತ್ತಿಕೊಳ್ಳದೆ ಹನ್ನೊಂದು ತಿಂಗಳು ದೇಶವನ್ನು ದೇವೆಗೌಡರು ಮುನ್ನಡೆಸಿದರು. ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ಅವರು ಮಾಜಿಯಾದರೂ ಇಂದಿಗೂ ಸಂಸತ್ ಸದಸ್ಯರು. ರಾಜ್ಯದಲ್ಲಿ ಮೊದಲ ಭಾರಿಗೆ ಸಮ್ಮಿಶ್ರ ಸರ್ಕಾರ ಇದ್ದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಸಮಾವೇಶದಲ್ಲಿ ಪಾಲ್ಗೊಂಡಿದ್ದರೆಂದು ಉಪಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸಿದ್ದರು. ತಮ್ಮ ಮಗ ಕುಮಾರಸ್ವಾಮಿ ಭಾಜಪದೊಂದಿಗೆ ಸೇರಿ ಮುಖ್ಯಮಂತ್ರಿಯಾದಾಗ ದೇಶಾದ್ಯಂತ ಟೀಕೆಗೂ ಒಳಗಾಗಿದ್ದರು. ಇವತ್ತು ಇದೇ ಸಿದ್ದರಾಮಯ್ಯರವರನ್ನು ಕುಮಾರಸ್ವಾಮಿ ಅವರ ಮುಖ್ಯಮಂತ್ರಿ ಕುರ್ಚಿಗೆ ಧಕ್ಕೆಯಾಗದಂತೆ ಗುರಾಣಿಯಂತೆ ಬಳಸಿಕೊಳ್ಳುತ್ತಿದ್ದಾರೆ. ಇರಲಿ, ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ. ಇವರ ಇನ್ನೊಬ್ಬ ಮಗ ಹೆಚ್.ಡಿ.ರೇವಣ್ಣ ಇಂದಿನ ಸರ್ಕಾರದಲ್ಲಿ ಲೋಕೋಪಯೋಗಿ ಮಂತ್ರಿ. ಸೊಸೆ ಅನಿತಾ ಕುಮಾರಸ್ವಾಮಿ ರಾಮನಗರದ ಶಾಸಕಿ. ಸೊಸೆಯ ಗೆಲುವಿಗಾಗಿ ಭಾಜಪದಿಂದ ನಿಂತಿದ್ದ ಅಭ್ಯರ್ಥಿಯನ್ನೇ ಪಕ್ಷಾಂತರಗೊಳಿಸಲಾಗಿತ್ತು. ಇನ್ನೋರ್ವ ಸೊಸೆ ಭವಾನಿ ರೇವಣ್ಣ ಕೆ.ಆರ್. ನಗರದಿಂದ ಸ್ಪರ್ಧಿಸಬೇಕೆಂಬು ಬಯಸಿದ್ದರು. ಇವರ ಪುತ್ರ ಪ್ರಜ್ವಲ್ ರೇವಣ್ಣ ಕೂಡ ಹುಣಸೂರಿನಿಂದ ಸ್ಪರ್ಧಿಸಲು ಮುಂದಾಗಿದ್ದರು. ಅಲ್ಲಿಂದ ಮಾಜಿ ಸಚಿವ ಹೆಚ್.ವಿಶ್ವನಾಥ್ ಸ್ಪರ್ಧೆ ಮಾಡುವರೆಂದು ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದರು. ಅಲ್ಲಿನ ಶಾಸಕರಾಗಿದ್ದ ಮುನಿರತ್ನ ಮೊದಲಿನಿಂದಲೂ ಕುಮಾರಸ್ವಾಮಿ ಅವರೊಂದಿಗೆ ಸ್ನೇಹ ಸಂಬಂಧ ಹೊಂದಿದ್ದರು. ಇನ್ನು ಇವರ ಬೀಗ ಡಿ.ಸಿ.ತಮ್ಮಣ್ಣ ಕೂಡ ಸಚಿವರಾಗಿದ್ದಾರೆ. ಹಾಗೆಯೇ ಯಡಿಯೂರಪ್ಪ ಭಾಜಪ ಪಕ್ಷದ ರಾಜ್ಯಾಧ್ಯಕ್ಷರು. ಇವರ ಮಗ ಬಿ.ವೈ ರಾಘವೇಂದ್ರ ಶಿವಮೊಗ್ಗ ಲೋಕಸಭಾ ಸದಸ್ಯ. ಇನ್ನೊಬ್ಬ ಮಗ ವಿಜಯೇಂದ್ರ ಮೈಸೂರಿನ ವರುಣಾದಲ್ಲಿ ಚುನಾವಣೆಗೆ ನಿಲ್ಲಲು ಹರಸಾಹಸಪಟ್ಟು ಸದ್ಯ ಪಕ್ಷದ ಪದಾಧಿಕಾರಿಯಾಗಿದ್ದಾರೆ. ಇದೇ ರೀತಿ ಈಶ್ವರಪ್ಪ ವಿಧಾನಸಭೆಯ ಸದಸ್ಯರಾಗಿದ್ದಾರೆ. ಇವರ ಮಗ ಕಾಂತೇಶ್ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾರೆ. ಅಲ್ಲದೆ ಬಂಗಾರಪ್ಪ ಅವರು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇವರ ಮಗ ಮಧು ಬಂಗಾರಪ್ಪ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಇವರ ಅಣ್ಣ ಕುಮಾರ ಬಂಗಾರಪ್ಪ ಅವರು ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇವರ ಸಹೋದರಿ ಕನ್ನಡದ ಮೇರುನಟ ಡಾ.ರಾಜ್‌ಕುಮಾರ್ ಅವರ ಸೊಸೆ ಕೂಡ ಇಲ್ಲಿ ಸಂಸತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದರು. ಸಮಾಜವಾದಿ ನಾಯಕ ಜೆ.ಹೆಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದವರು. ಇವರ ಮಗ ಮಹಿಮಾ ಪಟೇಲ್ ಕೂಡ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಪರಭಾವಗೊಂಡಿದ್ದಾರೆ. ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ರಾಷ್ಟ್ರ ರಾಜಕಾರಣದಲ್ಲಿದ್ದರೆ ಅವರ ಮಗ ಪ್ರಿಯಾಂಕ ಖರ್ಗೆ ರಾಜ್ಯದ ಕ್ಯಾಬಿನೆಟ್ ಸಚಿವರಾಗಿದ್ದಾರೆ. ರೈತನಾಯಕ ಬೈರೆಗೌಡ ಅವರು ಕೃಷಿ ಸಚಿವರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದರು. ಇವರ ಮಗ ಕೃಷ್ಣಬೈರೆಗೌಡ ಕೂಡ ಇಂದಿನ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದಾರೆ. ಸೋಷಿಯಲಿಷ್ಟ್ ಕಾಗೋಡು ತಿಮ್ಮಪ್ಪ ಅವರೂ ಕೂಡ ತಮ್ಮ ಮಗಳಾದ ಡಾ.ರಾಜಲಕ್ಷ್ಮಿಯನ್ನು ಸಾಗರ ವಿಧಾನಸಭಾ ಕ್ಷೇತ್ರದಿಂದ ಉಮೇದುವಾರಿಕೆ ಮಾಡಿಸಲು ಶತಪ್ರಯತ್ನ ಪಟ್ಟಿದ್ದರು.
ಮಾಜಿ ಗೃಹ ಸಚಿವ, ಹಾಲಿ ಶಾಸಕ ರಾಮಲಿಂಗಾರೆಡ್ಡಿಯವರ ಮಗಳು ಸೌಮ್ಯಾ ರೆಡ್ಡಿ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದಾರೆ. ಇದೇ ರೀತಿ ಸಿದ್ದರಾಮಯ್ಯ ಅವರ ಮಗ ಡಾ.ಯತೀಂದ್ರ ಅವರು ವರುಣಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಈಗಿನ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ತಂದೆ ಗುಂಡೂರಾವ್ ಅವರು ೧೯೮೦-೮೩ ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಬಂಡಾಯ, ಹೋರಾಟಗಳಿಗೆ ಹೆಸರಾದ ತಮಿಳುನಾಡಿನ ರಾಜಕಾರಣದಲ್ಲಿ ದಿವಂಗತ ಕರುಣಾನಿಧಿ ಅವರು ಮುಖ್ಯಮಂತ್ರಿಗಳಾಗಿ ಐದು ದಶಕಗಳ ಕಾಲ ಅಧಿಕಾರ ನಡೆಸಿದ್ದರು. ಇವರ ಮಗ ಮೂ.ಕ. ಸ್ಟಾಲಿನ್ ಡಿ.ಎಂ.ಕೆಯ ಅಧ್ಯಕ್ಷರಾಗಿದ್ದಾರೆ. ಇವರು ತಮ್ಮ ತಂದೆಯ ಸಂಪುಟದಲ್ಲಿ ಮಂತ್ರಿಯೂ ಆಗಿದ್ದರು. ಇವರ ಸಹೋದರ ಮೂ.ಕ.ಅಳಗಿರಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಜೊತೆಗೆ ಇವರ ಸೋದರಳಿಯ ದಯಾನಿಧಿ ಮಾರನ್ ಕೂಡ ಮನಮೋಹನ್‌ಸಿಂಗ್ ರ ಸಂಪುಟದಲ್ಲಿ ಸಚಿವರಾಗಿದ್ದರು. ಇವರ ಮಗಳಾದ ಕನಿಮೋಳಿ ರಾಜ್ಯಸಭಾ ಸದಸ್ಯರಾಗಿದ್ದಾರೆ. ಮೊಮ್ಮಗ ಉದಯನಿಧಿ ಸ್ಟಾಲಿನ್ ಅವರನ್ನು ಭವಿಷ್ಯದ ನಾಯಕ ಎಂದು ಬಿಂಬಿಸಲಾಗುತ್ತಿದೆ. ಹೀಗಿದ್ದರೂ ಕಲೈಗ್ನರ್ ಕರುಣಾನಿಧಿ ಅವರು ಬದುಕಿದ್ದಾಗ ಶಂಕರಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡುವುದನ್ನು ಅಪಹಾಸ್ಯ ಮಾಡುತ್ತಿದ್ದರು. ಅದಿಂದು ನೆನಪಾಗುತ್ತಿದೆ. ’ನಮ್ಮ ಪಕ್ಷ ಶಂಕರ ಮಠವಲ್ಲ’ ಎನ್ನುತ್ತಿದ್ದರು. ಶಂಕರಮಠವನ್ನು ಟೀಕಿಸಿದಂತೆ ಕರುಣಾನಿಧಿ ನಡೆದುಕೊಳ್ಳಲಿಲ್ಲ. ತಮ್ಮ ನಂತರ ಪಕ್ಷದ ಚುಕ್ಕಾಣಿ ತಮ್ಮ ಮಗನ ಕೈಯ್ಯಲ್ಲಿಯೇ ಇರಬೇಕೆಂದು ೨೦೧೭ ರ ಜನವರಿ ೪ ರಂದು ಕಾರ್ಯಾಧ್ಯಕ್ಷ ಹುದ್ದೆಯಲ್ಲಿ ಕೂರಿಸಿದ್ದರು. ಅವರು ಕಾಲವಾದ ನಂತರ ಸಹಜವಾಗಿ ಎಂಬಂತೆ ಸ್ಟಾಲಿನ್ ತಂದೆಯ ಕುರ್ಚಿಯಲ್ಲಿ ಕೂತರು. ಇಲ್ಲಿನ ಪಾಟ್ಟಾಳ್ ಮಕ್ಕಳ್ ಕಚ್ಚಿಯಲ್ಲಿಯೂ ವಂಶಾಡಳಿತದ್ದೇ ಅಧಿಪತ್ಯ. ಪಕ್ಷದ ಸಂಸ್ಥಾಪಕ ಅಧ್ಯಕ್ಷ ರಾಮದಾಸ್. ಇವರ ಮಗ ಡಾ.ಅನ್ಬುಮಣಿ ರಾಮದಾಸ್ ಧರ್ಮಪುರಿಯ ಸಂಸದರಾಗಿದ್ದರು. ಮನಮೋಹನ್ ಸಿಂಗ್ ಅವರ ಮಂತ್ರಿಮಂಡಲದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. ಅರ್ಥಶಾಸ್ತ್ರಜ್ಞ, ಮಾಜಿ ವಿತ್ತಸಚಿವ ಚಿದಂಬರಂ ಕೂಡ ತಮ್ಮ ಮಗ ಕಾರ್ತಿ ಚಿದಂಬರಂ ಅವರನ್ನು ಅಧಿಕಾರ ರಾಜಕಾರಣಕ್ಕೆ ತರಲು ಪ್ರಯತ್ನಿಸುತ್ತಲೇ ಇದ್ದಾರೆ. ಕಾರ್ತಿ ಚಿದಂಬರಂ ಟೆನ್ನಿಸ್ ಪ್ಲೇಯರ್ ಅಸೋಸಿಯೇಷನ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಇಳಂಗೋವನ್ ಕೂಡ ಇದೇ ಪ್ರಯತ್ನದಲ್ಲಿದ್ದಾರೆ. ಇನ್ನು ನಟ ವಿಜಯಕಾಂತ್ ಡಿಎಂಡಿಕೆ ಯ ಅಧ್ಯಕ್ಷರಾದರೆ ಅವರ ಪತ್ನಿ ಪ್ರೇಮಲತಾ ಪಕ್ಷದ ಮಹಿಳಾ ಘಟಕದ ಉಪಾಧ್ಯಕ್ಷೆಯಾಗಿದ್ದಾರೆ.
ಆಂದ್ರಪ್ರದೇಶದಲ್ಲಿ ಖ್ಯಾತ ನಟ ಎನ್.ಟಿ.ರಾಮರಾವ್ ಮುಖ್ಯಮಂತ್ರಿಯಾಗಿದ್ದರು. ಇವರು ಸಂಧ್ಯಾಕಾಲದಲ್ಲಿ ವಿವಾಹವಾದ ಶಿವಪಾರ್ವತಿ ರಾಜಕೀಯವಾಗಿ ಮುನ್ನೆಲೆಗೆ ಬರಲು ಪ್ರಯತ್ನಿಸಿದ್ದರು. ಆದರೆ ಇವರ ಅಳಿಯ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾದರು. ಎನ್.ಟಿ.ಆರ್ ಮಗ ನಂದಮೂರಿ ಬಾಲಕೃಷ್ಣ ಶಾಸಕರಾಗಿದ್ದಾರೆ. ಇನ್ನೊಬ್ಬ ಮಗ ಸಂಸತ್ ಸದಸ್ಯರಾಗಿದ್ದರು. ಕಲವಕುಂತಲತಾರಕ ರಾಮರಾವ್ ತೆಲಂಗಾಣ ರಾಷ್ಟ್ರಸಮಿತಿಯ ಕಾರ್ಯಾಧ್ಯಕ್ಷರಾಗಿ, ಶಾಸಕರಾಗಿ, ಕೈಗಾರಿಕಾ ಸಚಿವರಾಗಿದ್ದರು. ಇವರು ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರರಾಗಿದ್ದಾರೆ. ಇವರ ಪುತ್ರಿ ಸಹೋದರಿ ಕಲವಕುಂತಲ ಕವಿತಾ ಅವರು ಸಂಸತ್ ಸದಸ್ಯರಾಗಿದ್ದಾರೆ.
ಮಹರಾಷ್ಟ್ರದಲ್ಲಿಯೂ ಶಿವಸೇನೆಯ ಪರಮೋಚ್ಛ ನಾಯಕರಾಗಿದ್ದ ಬಾಳಾ ಠಾಕ್ರೆ ಅವರು ಅಧಿಕಾರ ತನ್ನ ಮಗನಿಗೆ ಸಿಗಬೇಕೆಂದು ತನ್ನ ಸಹೋದರ ಸಂಬಂಧಿಯನ್ನೇ ಉಚ್ಛಾಟಿಸಿದ್ದರು. ಭಾಜಪ ನಾಯಕರಾಗಿದ್ದ ಗೋಪಿನಾಥ್ ಮುಂಡೆ ಅವರ ಮಗಳಾದ ಪಂಕಜ ರಾಜ್ಯ ಸಚಿವೆಯಾಗಿದ್ದಾರೆ. ಇನ್ನೊಬ್ಬ ಮಗಳು ಪ್ರೀತಂ ಅವರು ಲೋಕಸಭಾ ಸದಸ್ಯರಾಗಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರ ತಂದೆ ವಿಧಾನ ಪರಿಷತ್‌ನ ಸದಸ್ಯರಾಗಿದ್ದಾರೆ. ಇವರ ಚಿಕ್ಕಮ್ಮ ಶೋಭಾ ಸಚಿವರಾಗಿದ್ದಾರೆ. ಸಚಿವ ವಿಶ್ವನಾಥ್ ಕಾಡ್ಸೆ ಅವರ ಸೊಸೆ ರಕ್ಷೆ ಅವರು ಸಂಸತ್ ಸದಸ್ಯರಾಗಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಶರದ್ ಪವಾರ್ ಇವರು ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿದ್ದರು. ಇವರ ಮಗಳು ಸುಪ್ರಿಯ ಸುಳೆ ಸಂಸತ್ ಸದಸ್ಯರಾಗಿದ್ದಾರೆ.
ಮಧ್ಯಪ್ರದೇಶದ ಮಾಧವ್ ರಾವ್ ಸಿಂದ್ಯ ಅವರದ್ದು ರಾಜಮನೆತನ. ಇವರು ಕೇಂದ್ರ ಮಾನವ ಸಂಪನ್ಮೂಲ, ವಿಮಾನಯಾನ, ಪ್ರವಾಸೋದ್ಯಮ, ರೈಲ್ವೆ ಖಾತೆಗಳ ಸಚಿವರಾಗಿದ್ದರು. ಇವರ ಮಗ ಜ್ಯೋತಿರಾದಿತ್ಯ ಸಿಂಧ್ಯ ಕೇಂದ್ರ ಇಂಧನ ಸಚಿವರಾಗಿದ್ದರು. ಇನ್ನೋರ್ವ ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವ ಅರ್ಜುನ್ ಸಿಂಗ್ ಕುಟುಂಬ ಕೂಡ ರಾಜಕಾರಣದಲ್ಲಿ ತೊಡಗಿಸಿಕೊಂಡಿದೆ. ರಾಜಸ್ಥಾನದ ಮುಖ್ಯಮಂತ್ರಿಯಾಗಿರುವ ವಸುಂಧರಾ ರಾಜೆ ಅವರ ಸಹೋದರಿ ಯಶೋಧರ ಕೂಡ ಇಲ್ಲಿ ಸಚಿವೆಯಾಗಿದ್ದರು. ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಮಗ ಮಂದರ್ ಮಹಾಜನ್ ಗೆ ಇಂಧೋರ್ ಮೂರನೇ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದರು. ಆದರೆ ಬಿ ಫಾರಂ ನಿರಾಕರಿಸಲಾಗಿತ್ತು. ಇದೇ ವೇಳೆ ಭಾಜಪ ಮುಖಂಡ ಕೈಲಾಸ್ ವಿಜಯ ವರ್ಗೀಯ ಮಗ ಆಕಾಶ್ ವಿಜಯ ವರ್ಗೀಯ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಇನ್ನೊಬ್ಬ ಕೇಂದ್ರ ಮಾಜಿ ಸಚಿವ ಸರ್ತಾಜ್ ಸಿಂಗ್ ಬಿ ಫಾರ್ಮ್ ನೀಡಿಲ್ಲವೆಂದು ಸಾರ್ವಜನಿಕರ ಮುಂದೆಯೇ ಕಣ್ಣೀರು ಹಾಕಿದ್ದರು.
ಪಂಜಾಬ್‌ನಲ್ಲಿ ಕೂಡ ಮಾಜಿ ಮುಖ್ಯಮಂತ್ರಿ ಪ್ರಕಾಶ್‌ಸಿಂಗ್ ಬಾದಲ್ ಕುಟುಂಬ ರಾಜಕಾರಣದಲ್ಲಿ ತೊಡಗಿಕೊಂಡಿದೆ. ಪ್ರಕಾಶ್ ಸಿಂಗ್ ಬಾದಲ್ ಅವರ ಮಗ ಸುಖದೀರ್ ಸಿಂಗ್ ಬಾದಲ್‌ನನ್ನು ಕಂಡರೆ ಅಲ್ಲಿನ ಧಾರ್ಮಿಕ ಮುಖಂಡರಲ್ಲಿ ವಿಶೇಷ ಗೌರವ ಇದೆ. ಇವರು ಉಪಮುಖ್ಯಮಂತ್ರಿಯಾಗಿ ಕೇಂದ್ರ ಕೈಗಾರಿಕೆ ಖಾತೆ ರಾಜ್ಯ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ರಾಜಸ್ಥಾನದಲ್ಲಿ ವಸುಂಧರ ರಾಜೆ ಮುಖ್ಯಮಂತ್ರಿಯಾಗಿದ್ದರು. ಇವರ ಪತಿ ಧೋಲ್‌ಪುರದ ಮಹಾರಾಜ ರಾಣಾ ಹೇಮಂತ್‌ಸಿಂಗ್ ಇವರ ಮಗ ದುಷ್ಯಂತ್ ಸಿಂಗ್ ಲೋಕಸಭಾ ಸದಸ್ಯರಾಗಿದ್ದಾರೆ. ರಾಜೇಶ್ ಪೈಲೆಟ್ ಅವರು ಕೇಂದ್ರ ಸರ್ಕಾರದಲ್ಲಿ ಪ್ರಭಾವಿ ಮಂತ್ರಿಯಾಗಿದ್ದವರು. ಇವರ ಮಗ ಸಚಿವ ಪೈಲಟ್ ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೂ ಕೂಡ ಹಿಂದೆ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಇಲಾಖೆಯ ಸಚಿವರಾಗಿದ್ದರು. ಜಸ್ವಂತ್ ಸಿಂಗ್ ಅವರು ಭಾಜಪದ ಅಧಿಕಾರದ ಅವಧಿಯಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇವರ ಮಗ ಮಾನವೇಂದ್ರ ಸಿಂಗ್ ಕಾಂಗ್ರೆಸ್‌ನ ಸಂಸತ್ ಸದಸ್ಯರಾಗಿದ್ದಾರೆ.
ಬಿಹಾರದಲ್ಲಿ ಲಾಲೂಪ್ರಸಾದ್ ಯಾದವ್ ಕುಟುಂಬದ್ದೇ ಅಧಿಪತ್ಯ. ಕೌಟುಂಬಿಕ ರಾಜಕಾರಣಕ್ಕೆ ಬಿಹಾರ ಹೆಸರುವಾಸಿಯಾಗಿದೆ. ಮುಖ್ಯಮಂತ್ರಿ ಕೇಂದ್ರ ಮಂತ್ರಿಯಾಗಿದ್ದ ಇವರಿಗೆ ೯ ಜನ ಮಕ್ಕಳಿದ್ದಾರೆ. ಮೇವು ಹಗರಣದಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವಾಗ ತನ್ನ ಪತ್ನಿ ರಾಬ್ಡಿದೇವಿಯನ್ನೇ ಮುಖ್ಯಮಂತ್ರಿಯನ್ನಾಗಿಸಿದ್ದರು. ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವೆ ಆದ ಮಹಾಮೈತ್ರಿಯಿಂದಾಗಿ ೨೦೧೫ ರಲ್ಲಿ ಬಹುಮತ ಗಳಿಸಲಾಗಿತ್ತು. ಆಗ ಹಿರಿಯ ಪುತ್ರ ತೇಜ್ ಪ್ರಸಾದ್ ಯಾದವ್‌ರನ್ನು ಬಿಟ್ಟು ಕಿರಿಯ ಪುತ್ರ ತೇಜಸ್ವಿ ಯಾದವ್‌ರನ್ನು ಉಪಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸಿದರು.
ಇಲ್ಲಿ ವಯೋಮಿತಿಗಿಂತ ವಯೋಧರ್ಮ ಗಣನೆಗೆ ತೆಗೆದುಕೊಂಡಂತಿದೆ. ತೇಜಸ್ವಿ ಯಾದವ್ ೨೦೧೭ ರಲ್ಲಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ತೇಜ್ ಪ್ರತಾಪ್ ಯಾದವ್ ತೇಜಸ್ವಿ ಯಾದವ್‌ಗಿಂತ ಒಂದು ವರ್ಷ ಹಿರೀಕ. ಸಮ್ಮಿಶ್ರ ಸರ್ಕಾದ ಪತನದಿಂದ ತೇಜ್ ಪ್ರತಾಪ್ ಯಾದವ್ ಅಧಿಕಾರ ಕಳೆದುಕೊಂಡಾಗ ಪಕ್ಷದಲ್ಲಿ ಪ್ರಮುಖ ಸ್ಥಾನ ಅಪೇಕ್ಷಿಸಿದ್ದನು. ಪರಿಗಣಿಸದಿದ್ದಾಗ ಅರ್ಜುನ್‌ನನ್ನು ಅಧಿಕಾರದಲ್ಲಿರಿಸಿ, ದ್ವಾರಕೆಗೆ ತೆರಳುವುದಾಗಿ ಟ್ವೀಟ್ ಕೂಡ ಮಾಡಿದ್ದನು. ಇನ್ನೊಂದು ಹಂತದಲ್ಲಿ ಅಣ್ಣತಮ್ಮಂದಿರಾದ ನಾವಿಬ್ಬರೂ ಕೃಷ್ಣ-ಬಲರಾಮರಂತೆ ಎಂದು ಹೇಳಿಕೊಂಡಿದ್ದನು. ಇಂತಹ ಪುರಾಣ ಉಲ್ಲೇಖಿತ ಮಾತುಗಳನ್ನೇ ಬಳಸಿ ಭಾಜಪ ಉಪಾಧ್ಯಕ್ಷ ದೇವೇಶ್‌ಕುಮಾರ್ ಹಿಂದೂ ಸಂಪ್ರದಾಯದಂತೆ ಲಾಲೂ ಹಿರಿಯ ಮಗ ತೇಜ್ ಪ್ರತಾಪ್ ಅವರು ಲಾಲೂನ ಉತ್ತರಾಧಿಕಾರಿಯಾಗಬೇಕಿತ್ತು ಎಂದಿದ್ದಾರೆ.
ಲಾಲೂ ಅವರಲ್ಲಿ ಉತ್ತರಾಧಿಕಾರತ್ವ ಸಂಪ್ರದಾಯವನ್ನು ಮುರಿದಿರುವುದು ತೇಜಸ್ವಿ ಯಾದವ್ ಉತ್ತಮ ಆಯ್ಕೆ ಎಂಬುದಾಗಿದೆ. ತೇಜಸ್ವಿ ಯಾದವ್ ತೇಜ ಪ್ರತಾಪ್ ಯಾದವ್ ಇಬ್ಬರೂ ಶಾಲೆಯನ್ನು ಅರ್ಧದಲ್ಲೇ ಬಿಟ್ಟವರು. ಅಂದರೆ ಡ್ರಾಪ್‌ಔಟ್. ತೇಜಸ್ವಿ ಯಾದವ್ ದೆಹಲಿಯ ಡೇರ್ ಡೆವಿಲ್ಸ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಸದಸ್ಯ. ೧೫ ಮತ್ತು ೧೯ ವರ್ಷದೊಳಗಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಟವಾಡಿದ್ದನು. ಹೀಗಾಗಿ ಸುಶಿಕ್ಷಿತ ಜನರೊಂದಿಗೆ ಒಡನಾಟ ಸಿಕ್ಕಿ ವ್ಯವಹರಿಸುವ ಕಲೆಯನ್ನು ಗಳಿಸಿಕೊಂಡಿದ್ದಾನೆ. ಆದರೆ ತೇಜ್ ಪ್ರತಾಪ್ ಯಾದವ್ ತಂದೆಯಂತೆ ಒರಟು ಸ್ವಭಾವದವ. ಸ್ವಲ್ಪ ಹುಂಬತನವನ್ನು ತುಂಬಿಕೊಂಡಿದ್ದಾನೆ. ಹೀಗಾಗಿಯೇ ಲಾಲೂ ಪ್ರಸಾದ್ ಯಾದವ್ ತೇಜಸ್ವಿ ಯಾದವ್‌ನನ್ನು ತನ್ನ ಉತ್ತರಾಧಿಕಾರಿಯೆಂಬಂತೆ ಬಿಂಬಿಸುತ್ತಿರಬಹುದು.
ತೇಜ್ ಪ್ರತಾಪ್ ಯಾದವ್‌ನನ್ನು ಸುಧಾರಿಸಲೆಂದೇ ಮಿರಂಡಾ ಅಕಾಡೆಮಿಯಲ್ಲಿ ಪದವೀಧರೆಯಾಗಿ ಅತ್ಯುತ್ತಮ ಇಂಗ್ಲಿಷ್ ಕೌಶಲ್ಯ ಹೊಂದಿದ್ದ ಐಶ್ವರ್ಯಳನ್ನು ವಿವಾಹ ಮಾಡಿಸಿದ್ದರು. ನಿರೀಕ್ಷೆಯಂತೆ ಓದಿಕೊಂಡಿರುವ ಹೆಂಡತಿಯೊಂದಿಗೆ ಬಾಳ್ವೆ ನಡೆಸಲು ತನಗೆ ಆಗುವುದಿಲ್ಲವೆಂದು ತೇಜ್ ಪ್ರತಾಪ್ ಯಾದವ್ ಹಠ ಹಿಡಿದು ಕೋರ್ಟ್ ಮೊರೆ ಹೋಗಿದ್ದಾನೆ. ಇದರಿಂದ ಸಹಜವಾಗಿ ಲಾಲೂ ಪ್ರಸಾದ್ ಯಾದವ್ ಹಿರಿಯ ಮಗನ ಮೇಲೆ ಅಸಮಾಧಾನಗೊಂಡಿದ್ದಾರೆ. ಇಷ್ಟಕ್ಕೂ ಹಿರಿಯ ಸಂತಾನಕ್ಕೆ ಅಧಿಕಾರ ಸಿಗಬೇಕೆಂದರೆ ಅದು ಹಿರಿಯ ಮಗಳಾದ ಮೀಸಾ ಭಾರತಿಗೆ ಸಿಗಬೇಕಿತ್ತು. ಮೀಸಾ ಭಾರತಿ ತನ್ನ ಸಹೋದರರಿಗಿಂತ ವಯೋಮಾನದಲ್ಲಿ ಅತ್ಯಂತ ಹಿರಿಯಳಾಗಿದ್ದಳು. ಶೈಕ್ಷಣಿಕವಾಗಿ ಎಂ.ಬಿ.ಬಿ.ಎಸ್ ಪದವೀಧರೆ. ಈಕೆ ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ರಾಜ್ಯಸಭೆಗೆ ಕಳುಹಿಸುವಂತೆ ಪಟ್ಟು ಹಿಡಿದಿದ್ದರು. ೨೦೧೫ ರ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಪದವಿ ಕೊಡಲಿಲ್ಲವೆಂದು ನೊಂದುಕೊಂಡಿದ್ದರು.
ಜಮ್ಮು ಕಾಶ್ಮೀರದಲ್ಲಿಯೂ ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷವನ್ನು ಅಬ್ದುಲ್ಲಾ ಕುಟುಂಬ ಆಳುತ್ತಾ ಬಂದಿದೆ. ಇಲ್ಲಿ ಶೇಕ್ ಅಬ್ದುಲ್ಲಾ ಮುಖ್ಯಮಂತ್ರಿ ಆಗಿದ್ದರು. ನಂತರ ಫಾರುಕ್ ಅಬ್ದುಲ್ಲಾ ಮುಖ್ಯಮಂತ್ರಿಯಾದರು. ಇವರ ಮಗ ಓಮರ್ ಅಬ್ದುಲ್ಲಾ ಕೂಡ ಮುಖ್ಯಮಂತ್ರಿಯಾಗಿದ್ದರು. ಇಲ್ಲಿನ ಪೀಪಲ್ ಡೆಮಾಕ್ರಾಟಿಕ್ ಪಾರ್ಟಿಯಿಂದ ಮುಫ್ತಿ ಮೊಹಮದ್ ಸಯ್ಯಿದ್ ಮುಖ್ಯಮಂತ್ರಿಯಾಗಿದ್ದರು. ಇವರ ನಂತರ ಇವರ ಪುತ್ರಿ ಮೆಹಬೂಬ್ ಮುಫ್ತಿ ಕೂಡ ಮುಖ್ಯಮಂತ್ರಿಯಾಗಿದ್ದರು.
ಬಿಹಾರದ ಕುಟುಂಬ ರಾಜಕಾರಣದ ಅಸಮಧಾನ ಬೀದಿಗೆ ಬರುವ ಮುನ್ನ ಹರಿಯಾಣದ ಭೀಷ್ಮ, ದೇಶದ ರೈತ ನಾಯಕ ಮಾಜಿ ಉಪ ಪ್ರಧಾನಿ ದೇವಿಲಾಲ್ ಕುಟುಂಬ ರಾಜಕಾರಣ ಸ್ಪೋಟಗೊಂಡಿತ್ತು. ದೇವಿಲಾಲ್ ಅವರು ಕಟ್ಟಿದ್ದ ಭಾರತೀಯ ರಾಷ್ಟ್ರೀಯ ಲೋಕದಳ ಅಧಿಪತ್ಯಕ್ಕಾಗಿ ಓಂ ಪ್ರಕಾಶ್ ಚೌತಾಲ, ರಣಜಿತ್ ಸಿಂಗ್, ಪ್ರತಾಪ್ ಸಿಂಗ್‌ರ ನಡುವೆ ಮಾರಾಮರಿ ನಡೆದಿತ್ತು. ಅಂತಿಮವಾಗಿ ಓಂ ಪ್ರಕಾಶ್ ಚೌತಾಲ ಗೆಲುವಿನ ನಗೆ ಬೀರಿದ್ದರು.
ಇದೇ ರೀತಿಯ ಛಿದ್ರರಾಜಕಾರಣ ಉತ್ತರಪ್ರದೇಶದಲ್ಲಿಯೂ ಆಗಿದೆ. ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್ ಯಾದವ್ ಅವರು ಮಾಜಿ ಮುಖ್ಯಮಂತ್ರಿ ಮುಲಯಂ ಸಿಂಗ್ ಯಾದವ್ ಅವರ ಪುತ್ರ. ಮುಲಯಂ ಸಿಂಗ್ ಯಾವ್ ಅವರು ಕೇಂದ್ರ ಮಂತ್ರಿ ಕೂಡ ಆಗಿದ್ದರು. ಅಖಿಲೇಶ್ ಇಂಜಿನಿಯರಿಂಗ್ ಪದವಿ ಪಡೆದವರು. ೨೦೧೨ರಲ್ಲಿ ಮುಲಾಯಂ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಬೇಕಿದ್ದರಿಂದ ಮಗನನ್ನು ಚುನಾವಣೆಗೆ ಸ್ಪರ್ಧಿಸುವಂತೆ ನೋಡಿಕೊಂಡರು. ತಂದೆಗಿಂತ ಭಿನ್ನವಾಗಿ ಆಲೋಚಿಸುತ್ತಿದ್ದ ಅಖಿಲೇಶ್ ಅಲ್ಲಿನ ಜನರ ಪಾಲಿಗೆ ಹೀರೋ ಆಗಿಬಿಟ್ಟರು. ಅಧಿಕಾರದ ದಂಡ ಅಖಿಲೇಶ್ ಕೈಗೆ ಹೋಗುತ್ತಿದ್ದಂತೆ ಅವರ ಹೆಂಡತಿ ಡಿಂಪಲ್ ಯಾದವ್ ಅವರನ್ನು ಲೋಕಸಭಾ ಸದಸ್ಯರನ್ನಾಗಿಸಿದರು. ಅಖಿಲೇಶ್ ಜನಪ್ರಿಯತೆ ಕಂಡು ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಗೆ ಸಹಿಸಿಕೊಳ್ಳಲು ಆಗಲಿಲ್ಲ. ತನ್ನ ಸಹೋದರ ಮತ್ತು ಅವರೇ ಕುಟುಂಬ ರಾಜಕಾರಣದ ವಿರುದ್ಧ ಸಿಡಿದೆದ್ದರು. ಹೀಗಾಗಿ ೨೦೧೭ರ ಚುನಾವಣೆಯಲ್ಲಿ ಸೋತು ಸುಣ್ಣವಾದರು. ಕೊನೆಗೂ ಶಿವಪಾಲ್ ಯಾದವ್ ಅವರ ಪ್ರೀತಿಯ ಮಗ ಆದಿತ್ಯ ಯಾದವ್ ಗೆ ಕೋ-ಆಪರೇಟೀವ್ ಫೆಡರೇಷನ್ ನ ಅಧ್ಯಕ್ಷಗಿರಿ ಬಿಟ್ಟರೆ ಹೆಚ್ಚಿನದು ಸಿಗಲೇ ಇಲ್ಲ. ಇದಕ್ಕಾಗಿಯೇ ಮುಲಾಯಂ ಸಹೋದರ ಶಿವಪಾಲ್ ಯಾದವ್ ಪ್ರತ್ಯೇಕ ಪಕ್ಷ ಕಟ್ಟಿದರು. ಸಮಾಜವಾದಿ ಪಕ್ಷದ ಚಿಹ್ನೆ ಸೈಕಲ್‌ಗಾಗಿ ಕಾದಾಡಿದ್ದರು. ಮುಲಾಯಂರ ಎರಡನೇ ಪತ್ನಿ ಸಾಧನಾ ಅವರ ಮಗ ಪ್ರತೀಕ್ ಯಾದವ್‌ನನ್ನು ಮತ್ತು ಅವರ ಪತ್ನಿ ಅಪರ್ಣ ಯಾದವ್ ಅವರನ್ನು ಅಖಿಲೇಶ್ ವಿರುದ್ಧ ಎತ್ತಿಕಟ್ಟಿದರು. ಅಪರ್ಣಯಾದವ್ ಕೂಡ ಶಾಸಕಿ. ಜೊತೆಗೆ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಯೂನಿರ್ವಸಿಟಿಯಿಂದ ಸ್ನಾತಕೋತ್ತರ ಪದವಿ ಗಳಿಸಿದವರು. ಇವರೆಲ್ಲರ ಒಳಜಗಳಗಳಿಂದಾಗಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸೋತು ಸುಣ್ಣವಾಗಬೇಕಾಯಿತು.
ಇನ್ನು ದೇಶದ ರಾಜಕಾರಣದಲ್ಲಿ ನೆಹರೂ ಕುಟುಂಬ ಹಲವು ದಶಕಗಳಿಂದ ಅಧಿಕಾರ ಗದ್ದುಗೆ ಹಿಡಿದುಕೊಂಡಿದೆ. ಅಧಿಕಾರಕ್ಕಾಗಿ ಕಿತ್ತಾಡಿದ ಕುಟುಂಬಗಳಲ್ಲಿ ನೆಹರೂ ಕುಟುಂಬವೂ ಒಂದಾಗಿದೆ. ಭಾರತದ ಕಬ್ಬಿಣದ ಮಹಿಳೆಯೆಂದೇ ಖ್ಯಾತರಾಗಿದ್ದ ಪ್ರಧಾನಿ ಇಂದಿರಾಗಾಂಧಿ ಕೂಡ ತಮ್ಮ ಉತ್ತರಾಧಿಕಾರಿಯನ್ನಾಗಿ ಮೊದಲ ಮಗ ರಾಜೀವ್ ಬದಲಾಗಿ ಸಂಜಯ್‌ರನ್ನೇ ಆಯ್ಕೆ ಮಾಡಿಕೊಂಡಿದ್ದರು. ವಿಧಿಲಿಖಿತ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ಜೀವ ತೊರೆದರು. ಆಗ ಸಹಜವಾಗಿ ಈಗಿನ ಕೇಂದ್ರ ಪರಿಸರ ಸಚಿವೆ ಮನೇಕಾ ಗಾಂಧಿ ಸಂಜಯ್ ಗಾಂಧಿಯವರ ಸ್ಥಾನದಲ್ಲಿ ಆಕ್ರಮಿಸಿಕೊಳ್ಳುವರೆಂದು ಎಲ್ಲರೂ ಭಾವಿಸಿದ್ದರು. ಪುತ್ರವ್ಯಾಮೋಹ ಭಾರತದ ಕುಟುಂಬ ಸೈಕಾಲಜಿ ಇಂದಿರಾಗಾಂಧಿಯವರನ್ನು ಬಿಟ್ಟಿರಲಿಲ್ಲ. ಸಂಜಯ್ ಇಲ್ಲದ ಮನೇಕಾರನ್ನು ಮನೆಯಿಂದ ಹೊರಗಟ್ಟಿದ್ದರು. ಹೊರಹೋದ ಮನೇಕಾ ಗಾಂಧಿ ಸಂಜಯ್ ಮಂಚ್ ಕಟ್ಟಿದರು. ನಂತರ ಭಾಜಪ ಸೇರಿಕೊಂಡರು. ತಮ್ಮ ಮಗನನ್ನೂ ಸೇರಿಸಿದರು. ಇವರ ಮಗ ವರುಣ್ ಗಾಂಧಿ ಕೂಡ ಲೋಕಸಭೆ ಸದಸ್ಯರಾಗಿದ್ದಾರೆ. ಇಂದಿರಾ ಗಾಂಧಿಯವರ ನಂತರ ಅವರ ಮಗ ರಾಜೀವ್ ಗಾಂಧಿ ದೇಶದ ಪ್ರಧಾನಿಯಾದರು. ರಾಜೀವ್ ಗಾಂಧಿಯವರು ಬಾಂಬ್ ಸ್ಪೋಟಕ್ಕೆ ಬಲಿಯಾದರು. ನಂತರ ಮುನ್ನೆಲೆಗೆ ಬಂದಿದ್ದು ಸೋನಿಯಾ ಗಾಂಧಿ. ಇವರು ವಿದೇಶಿ ಮೂಲದವರು ಎಂಬ ಕಾರಣಕ್ಕೆ ಪ್ರಧಾನಿ ಹುದ್ದೆಗೇರಲಿಲ್ಲ. ಕಾಂಗ್ರೆಸ್ ಪಕ್ಷದ ಮತ್ತು ಯುಪಿಎ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇದೀಗ ಇವರ ಮಗ ರಾಹುಲ್ ಗಾಂಧಿ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದಾರೆ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಹೋರಾಡುತ್ತಿದ್ದಾರೆ.
ದೇಶದ ಉದ್ದಗಲಕ್ಕೂ ಕಂಡುಬರುವ ಕುಟುಂಬ ರಾಜಕಾರಣ, ಹಗೆತನ, ಹಪಾಹಪಿ ನಡುವೆ ಪಶ್ಚಿಮ ಬಂಗಾಳ ವಿಭಿನ್ನವಾಗಿ ಕಂಡುಬರುತ್ತದೆ. ಅಲ್ಲಿ ಮೂರು ದಶಕಗಳಿಗಿಂತ ಹೆಚ್ಚು ಕಾಲದಿಂದ ಆಡಳಿತ ನಡೆಸಿದ ಕಮ್ಯೂನಿಸ್ಟರು ವಂಶಾಡಳಿತ ರಾಜಕಾರಣಕ್ಕೆ ಅವಕಾಶ ಕೊಟ್ಟಿಲ್ಲ. ಏಳು ವರ್ಷಗಳಿಂದಲೂ ಆಡಳಿತ ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಕೂಡ ವಂಶಾಡಳಿತಕ್ಕೆ ಮುಂದಾಗಿಲ್ಲ.
ಇಂತಹದ್ದೊಂದು ಅರೆಸೊತ್ತಿಗೆ ರಾಜಕಾರಣವನ್ನು ಕಂಡರೂ ಮೌನವಾಗಿದ್ದೇವೆ. ಇದರ ವಿರುದ್ಧ ಬಂಡಾಯ ಏಳುವ ಮನೋಭಾವನೆಯನ್ನೇ ರೂಢಿಸಿಕೊಂಡಿಲ್ಲ. ಇದಕ್ಕೆ ಧರ್ಮ, ಜಾತಿ, ಭಾಷೆ, ದುಡ್ಡು, ಆಮಿಷ, ವರ್ಣ, ಗಡಿ, ಸ್ಥಳೀಯತೆ, ಅನಕ್ಷರತೆ, ಮೂಢನಂಬಿಕೆ ಇವೆಲ್ಲ ಯಾವುದಾದರೊಂದು ಪ್ರಭಾವ ಬೀರಿರಲೇಬೇಕು. ಹೀಗಾಗಿ ನಾವುಗಳೆಲ್ಲರೂ ಸಾಂಪ್ರದಾಯಿಕ ಗುಲಾಮಗಿರಿಗೆ ಒಗ್ಗಿಬಿಟ್ಟಿದ್ದೇವೆ. ನೆಹರು ಅವರು ಪ್ರಧಾನಿ ಆಗಿದ್ದಾಗ ವಲಭಭಾಯಿ ಪಟೇಲ್ ಅವರು ಗೃಹ ಸಚಿವರಾಗಿ ರಾಜ ಆಡಳಿತವನ್ನು ಕೊನೆಗಾಣಿಸದಿದ್ದಲ್ಲಿ ಐತಿಹಾಸಿಕ ಗುಲಾಮಗಿರಿಯಲ್ಲೇ ನೆರಳಬೇಕಿತ್ತು.










