ಚಿಕ್ಕಮಗಳೂರು : ಸಖರಾಯಪಟ್ಟಣದ ಅಯ್ಯನಕೆರೆ ಸೌಂದರ್ಯವನ್ನ ನೋಡ್ದೋರೆಲ್ಲಾ ಫಿದಾ….!

2123
firstsuddi

ಕಡೂರು : ಆಗಸ್ಟ್ ಮೊದಲ ವಾರದ ಮಲೆನಾಡಿನ ಜಲಪ್ರಳಯಕ್ಕೆ ಮಲೆನಾಡಿಗರ ಬದುಕು ಮೂರಾಬಟ್ಟೆಯಾಗಿ ನಿಲ್ಲೋ… ನಿಲ್ಲೋ… ಮಳೆರಾಯ ಅಂತಿದ್ದರು. ಆದರೆ, ಬಯಲುಸೀಮೆ ಜನ ಹುಯ್ಯೋ… ಹುಯ್ಯೋ… ಮಳೆರಾಯ ಅಂತಿದ್ರು. ಯಾಕಂದ್ರೆ, ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆ ಮೂರು ಹವಾಗುಣ ಹೊಂದಿರುವ ಕಾಫಿನಾಡಲ್ಲಿ ಒಂದೊಂದು ಭಾಗದ್ದು ಒಂದೊಂದು ರೀತಿಯ ಗೋಳು. ಅಲ್ಲಿ ಅಲ್ಲೋಲ-ಕಲ್ಲೋಲ, ಇಲ್ಲಿ ಹರ್ಷೋದ್ಘಾರ. ಅಲ್ಲಿ ನೀರಿಂದಲೇ ಬದುಕು ಬೀದಿಗೆ ಬಂತು. ಇಲ್ಲಿ ಅದೇ ನೀರು ಬದುಕುವ ಆಸೆ ತಂತು ಎಂಬಂತಾಗಿದೆ. ಶಾಶ್ವತ ಬರಗಾಲಕ್ಕೆ ತುತ್ತಾಗಿದ್ದ ಕಡೂರು ತಾಲೂಕಿನ ಅಯ್ಯನಕೆರೆ ತುಂಬಿರೋದು ಈ ಭಾಗದ ಜನರಿಗೆ ಮರಳುಗಾಡಲ್ಲಿ ಓಯಾಸೀಸ್ ಸಿಕ್ಕಂತಾಗಿದೆ. ಜನ ಕೆರೆ ತುಂಬಿತು ಎಂದು ಖುಷಿಯಾಗಿದ್ರೆ, ಪ್ರವಾಸಿಗ್ರು ಇಲ್ಲಿನ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.

ಹೌದು… ಕಡೂರು ತಾಲೂಕು ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕು ಹನಿ ನೀರಿಗೂ ಹಾಹಾಕಾರ. ಜನ-ಜಾನುವಾರುಗಳಿಗೆ ಕುಡಿಯೋ ನೀರಿನ ಸಮಸ್ಯೆ ಯತೇಚ್ಛವಾಗಿದ್ದು, ಟ್ಯಾಂಕರ್ನಲ್ಲಿ ನೀರು ಪೂರೈಸಿದ್ರು. ನೀರು-ಮೇವಿಲ್ಲದೆ ಜಾನುವಾರುಗಳನ್ನು ಗುಡ್ಡಕ್ಕೆ ಹೊಡೆದು ಬರ್ತಿದ್ರು. ಹೋದಷ್ಟು ರೇಟಿಗೆ ಹೋಗ್ಲಿ ಅಂತ ಮಾರಿದ್ರು. ಕಡೂರಲ್ಲಿ ಇಂದಿಗೂ ನೀರಿನ ಸಮಸ್ಯೆಯ ಗ್ರಾಮಗಳಿವೆ. ಆದ್ರೆ, ಸಖರಾಯಪಟ್ಟಣದ ಅಯ್ಯನಕೆರೆ ತುಂಬಿರೋದು ಹತ್ತಾರು ಹಳ್ಳಿಗರಿಗೆ ಖುಷಿ ತಂದಿದೆ. ಸುಮಾರು 100 ಎಕರೆ ವಿಸ್ತೀರ್ಣವುಳ್ಳ ಈ ಕೆರೆ ಐದರಿಂದ ಆರು ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತೆ. ಹಾಗಾಗಿ, ಕೆರೆ ತುಂಬಿರೋದ್ರಿಂದ ಇಂದು ಸಚಿವ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ ಧರ್ಮೇಗೌಡ, ಬೋಜೇಗೌಡ ಅಯ್ಯನಕರೆಗೆ ಬಾಗಿನ ಅರ್ಪಿಸಿದ್ದಾರೆ. ಕೆರೆ ತುಂಬಿರೋದ್ರಿಂದ ಮಕ್ಕಳಿಗಂತೂ ಖುಷಿಯೋ ಖುಷಿ. ಕೋಡಿ ಬಿದ್ದಿರೋ ನೀರಲ್ಲಿ ಸ್ನಾನ ಮಾಡ್ತಾ ಎಂಜಾಯ್ ಮಾಡ್ತಿದ್ದಾರೆ. ಮನಸ್ಸಿಗೆ ಇಷ್ಟವಾದಂತೆ ನೀರಿಗೆ ಹಾರುತ್ತ ಎಂಜಾಯ್ ಮಾಡ್ತಿದ್ದಾರೆ.

ನೀರಲ್ಲಿ ಕಬ್ಬಡ್ಡಿ ಆಡ್ತಿರೋ ಮಕ್ಕಳು. ನಾನಾ-ನೀನಾ ಅಂತ ಸರದಿ ಸಾಲಲ್ಲಿ ಡೈ ಹೊಡೆಯುತ್ತಿರೋ ಯುವಕರು. ಸುತ್ತಲಿನ ಹಸಿರ ಗುಡ್ಡಗಳ ರಿಫ್ಲ್ಯಾಕ್ಟ್ ನೀರಿನ ಬಣ್ಣವನ್ನೇ ಬದಲಿಸಿರೋದು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಅಯ್ಯನಕೆರೆಯನ್ನು ನೋಡಲು ಎರಡು ಕಣ್ಣು ಸಾಲದಂತಾಗಿದೆ. ಮಲೆನಾಡಿನ ಮಳೆ ಅಬ್ಬರಕ್ಕೆ ಕಳೆದೊಂದು ವಾರದಿಂದ ಆಕರ್ಷಣೆಯ ಕೇಂದ್ರ ಬಿಂದುವಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಏಳು ಗಡ್ಡಗಳ ಮಧ್ಯೆ ಇರೋ ಈ ಕೆರೆಯ ಸೌಂದರ್ಯಕ್ಕೆ ಕೆರೆಯ ಸಾಕ್ಷಿಯಂತಾಗಿದೆ. ಹಸಿರ ನೀರಿನ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಹರಿದು ಬರ್ತಿದ್ದು. ಇಲ್ಲಿ ಬೋಟಿಂಗ್ ವ್ಯವಸ್ಥೆಗೆ ಸರ್ಕಾರ ಚಿಂತನೆ ನಡೆಸಿದೆ. ಈ ಕೆರೆ ತುಂಬಿರೋದು ಪ್ರವಾಸಿಗರಿಗೆ ಮನೋರಂಜನೆ ನೀಡ್ತಿದ್ರೆ, ಹಳ್ಳಿಗರಿಗೆ ನಿಟ್ಟುಸಿರು ಬಿಟ್ಟಿದ್ದಾರೆ.

ಚಂದ್ರದ್ರೋಣ ಪರ್ವತ ಶ್ರೇಣಿಗೆ ಭೇಟಿ ನೀಡೋ ಪ್ರವಾಸಿಗ್ರು ಇಲ್ಲಿಗೂ ಭೇಟಿ ನೀಡಿ ಇಲ್ಲಿನ ಸೌಂದರ್ಯಕ್ಕೆ ಮಾರು ಹೋಗ್ತಿದ್ದಾರೆ. ಅದ್ರಲ್ಲೂ ಇಲ್ಲಿ ಯುವಕ-ಯುವತಿಯರು, ಪ್ರೇಮಿಗಳ ಸಂಖ್ಯೆಯೇ ಹೆಚ್ಚು. ವೀಕೆಂಡ್ನಲ್ಲಿ ಇಲ್ಲಿಗೆ ಆಗಮಿಸೋ ಪ್ರವಾಸಿಗರು ದಿನವಿಡೀ ಕೆರೆ ಬಳಿ ಕುಣಿದು ಕುಪ್ಪಳಿಸ್ತಾರೆ. ಮತ್ತೊಂದೆಡೆ ಸಾಹಸಿ ಈಜುಪಟುಗಳು ಮನಸ್ಸಿಗೆ ತೋಚಿದಂತೆಲ್ಲಾ ಬಿದ್ದು ತಮ್ಮ ಆಸೆ ಪೂರೈಸಿಕೊಳ್ತಿದ್ದಾರೆ. ಇಲ್ಲಿ ಹರಿಯೋ ನೀರು ಕಡೂರಿನ ಬಹುತೇಕ ಭಾಗಕ್ಕೆ ಕುಡಿಯೋ ನೀರಿನ ಸೌಲಭ್ಯ ಕಲ್ಪಿಸಿದೆ. ಇಲ್ಲಿನ ಊರುಕಾಲುವೆ, ಬಸವನಕಾಲುವೆ, ಕಡೇ ಕಾಲುವೆ, ಗೌರಿ ಹಳ್ಳಿ ನಾಲ್ಕು ಕಾಲುವೆಗಳಾಗಿ ಹರಿಯೋ ನೀರು ಸಾವಿರಾರು ಜನರಿಗೆ ಬದುಕುವ ಚೈತನ್ಯ ತಂದಿದೆ. ಆದ್ರೀಗ, ಸರ್ಕಾರ ಈ ಕೆರೆಗೆ ಬೋಟಿಂಗ್ ವ್ಯವಸ್ಥೆಗೆ ಮುಂದಾಗಿರೋದ್ರಿಂದ ವ್ಯವಹಾರದ ದೃಷ್ಠಿಯಿಂದ ಸ್ಥಳಿಯರಿಗೆ ಹಾಗೂ ಪ್ರವಾಸಿಗರಿಗೆ ಮತ್ತಷ್ಟು ಖುಷಿ ತಂದಿದೆ.

ಮಲೆನಾಡಿನ ಮಳೆ ಒಂದೆಡೆ ಖುಷಿ ತಂದ್ರೆ, ಮತ್ತೊಂದೆಡೆ ನೋವು ತರಿಸಿದೆ. ಮಲೆನಾಡಿಗರು ನಮಗೆ ಮಳೆಯೇ ಬೇಡ ಅಂತಿದ್ರೆ ಕಡೂರಿಗರು ಮಾತ್ರ ಇಂದಿಗೂ ಹುಯ್ಯೋ ಹುಯ್ಯೋ ಮಳೆರಾಯ ಅನ್ನೋದ್ನ ಬಿಟ್ಟಿಲ್ಲ. ಆದ್ರೆ, ಪ್ರವಾಸಿ ತಾಣವಾಗಿ ಈ ನಯನ ಮನೋಹರ ಜಾಗ ಪ್ರವಾಸಿಗರನ್ನ ಕೈ ಬಿಸಿ ಕರೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಕೆರೆಯ ಸೌಂದರ್ಯ ರಾಶಿ ಕೂಡ ಕಣ್ಣಲ್ಲಿ ಕಟ್ಟುವಂತಿದೆ. ಇಲ್ಲಿ ಬೋಟಿಂಗ್ ವ್ಯವಸ್ಥೆಯಾದ್ರೆ ಸ್ಥಳಿಯ ಸಾವಿರಾರು ಜನರಿಗೆ ಉದ್ಯೋಗ ಸಿಗೋದ್ರಲ್ಲಿ ಅನುಮಾನವೇ ಇಲ್ಲ.