ಚಿಕ್ಕಮಗಳೂರು : ಎರಡೂವರೆ ವರ್ಷದ ಹಿಂದೆ ಅಂಗಡಿ ಕಂಡ ಕೂಡಲೇ ಸಿಗರೇಟ್ ಬಾಯಿಗಿಟ್ಟು ಸ್ಟೈಲಾಗಿ ಹೊಗೆ ಬಿಡ್ತಿದ್ದ ಧೂಮಪಾನಿಗಳಿಗೆ ಅಂದಿನ ಎಸ್ಪಿ ಆರ್.ಚೇತನ್ ಸಿಂಹಸ್ವಪ್ನರಾಗಿದ್ರು. ಕೋಟ್ಪಾ ಕಾಯ್ದೆಯನ್ನ ಯಶಸ್ವಿಯಾಗಿ ಜಾರಿಗೆ ತಂದ ಜಿಲ್ಲೆಗಳಲ್ಲಿ ದೇಶದಲ್ಲೇ ಕಾಫಿನಾಡು ಮೂರನೇ ಸ್ಥಾನಲ್ಲಿತ್ತು. ಆದ್ರೆ, ಸಾರ್ವಜನಿಕ ಪ್ರದೇಶಗಳಲ್ಲಿ ಧಮ್ ಹೊಡೆಯೋದಕ್ಕೆ ಬ್ರೇಕ್ ಹಾಕಿದ್ದ ಕೋಟ್ಪಾ ಕಾಯ್ದೆ ಮೂರೇ ವರ್ಷಕ್ಕೆ ಚಿಕ್ಕಮಗಳೂರಿನ ಚಳಿಗೆ ಮೂಲೆ ಸೇರಿದೆ.
ಮೂರೇ ತಿಂಗಳಿಗೆ ಒಂದೂವರೆ ಸಾವಿರ ಕೇಸ್ ಹಾಕಿ, ಎರಡು ಲಕ್ಷ ದಂಡ ಹಾಕಿದ್ದ ಆರ್.ಚೇತನ್ ಹವಾ ಅವರ ಜೊತೆಯೇ ಬಳ್ಳಾರಿಗೆ ಹೋಯ್ತು ಅನ್ಸತ್ತೆ. ಯಾಕಂದ್ರೆ, ಚಿಕ್ಕಮಗಳೂರಿನಲ್ಲಿ ಶಾಲಾ-ಕಾಲೇಜುಗಳ ಅಕ್ಕಪಕ್ಕದ ಅಂಗಡಿಗಳಲ್ಲೇ ಎಗ್ಗಿಲ್ಲದೆ ಸಿಗರೇಟ್ ಸೇಲ್ ಆಗ್ತಿದೆ. ಎಲ್ಲೆಂದರಲ್ಲಿ ಸಿಗರೇಟ್ ಹಚ್ಚಿಕೊಂಡು ರಿಂಗ್-ರಿಂಗ್ ಆಗಿ ಹೊಗೆ ಬಿಟ್ರು ಹೇಳೋರಿಲ್ಲ-ಕೇಳೋರಿಲ್ಲ. ಅಕ್ಟೋಬರ್ 21, 2014ರಿಂದ ಜಾರಿಗೆ ಬಂದ ಕೋಟ್ಪಾ ಕಾಯ್ದೆ ಆರಂಭದಲ್ಲಿ ಸ್ಟ್ರಾಂಗ್ ಆಗೇ ಇತ್ತು. ಪೊಲೀಸರು ಹುಡುಕಿ-ಹುಡುಕಿ ಕೇಸ್ ಹಾಕಿದ ಪರಿಣಾಮ ಮೂರೇ ತಿಂಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬಿಡಿ-ಸಿಗರೇಟ್, ತಂಬಾಕು ಉತ್ಪನ್ನ ಮಾರಾಟಕ್ಕೆ ಮುಕ್ತಿ ಹಾಡಿದ್ರು.
ಚಟವಿದ್ದೋರು ಕದ್ದು-ಮುಚ್ಚಿ ಭಯದಲ್ಲಿ ಅರ್ಧಂಬರ್ಧ ಸಿಗರೇಟ್ ಸೇದುತ್ತಿದ್ರು. ಆದ್ರೀಗ, ಪೊಲೀಸರು ಮೌನ ವಹಿಸಿದ ಕಾರಣ ಎಲ್ಲೆಂದರಲ್ಲಿ ಹೊಗೆ ಬಿಡ್ತಿರೋರ ಕಾಟ ಹೆಚ್ಚಿದೆ. ಬಸ್ ಸ್ಟ್ಯಾಂಡ್, ಆಟೋ ನಿಲ್ದಾಣ, ಕಾಲೇಜು ಸುತ್ತಮುತ್ತ ಹೊಗೆಯ ಹವಾ ಹೆಚ್ಚಿದೆ. ಮಹಿಳೆಯರು-ಹೆಣ್ಣುಮಕ್ಕಳು ಬರ್ತಿದ್ದಾರೆ ಅನ್ನೋದನ್ನೂ ನೋಡದ ಧೂಮವ್ಯಸನಿಗಳು ಕಣ್ಣು, ಕಿವಿ, ಮೂಗಿನಲ್ಲೆಲ್ಲಾ ಹೊಗೆ ಬಿಡ್ತಿರೋದು ಸಾರ್ವಜನಿಕರಿಗೆ ಕಿರಿ-ಕಿರಿಯಾಗ್ತಿದೆ. ಆದ್ದರಿಂದ ಕಾಲೇಜು ವಿದ್ಯಾರ್ಥಿಗಳು ಎಸ್ಪಿ ಅಣ್ಣಾಮಲೈ ಕೋಟ್ಪಾ ಕಾಯ್ದೆಯನ್ನ ಕಠಿಣವಾಗಿ ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ದಂಡ ವಿಧಿಸಲು ಪೆÇಲೀಸರ ಜೊತೆ ಇತರೇ 15ಕ್ಕೂ ಹೆಚ್ಚು ಇಲಾಖೆಗಳ ಅಧಿಕಾರಿಗಳಿಗೆ ಅವಕಾಶವಿತ್ತು. ಆದ್ರೆ, ಇತರೇ ಇಲಾಖೆಯ ಅಧಿಕಾರಿಗಳು ಆ ಜವಾಬ್ದಾರಿಯನ್ನ ಪೆÇಲೀಸರ ಹೆಗಲಿಗಾಗಿ ಕೈತೊಳೆದುಕೊಂಡ್ರು. ಪೊಲೀಸರಿಗೆ ಸ್ಟೇಷನ್‍ನಲ್ಲೇ ಸಾಕಷ್ಟು ಕೆಲಸ-ಕಾರ್ಯಗಳಿರೋದ್ರಿಂದ ಕೋಟ್ಪಾದ ಬಗ್ಗೆ ಹೆಚ್ಚಿನ ಕಾಳಜಿ ವಹಿಸೋಕೆ ಆಗದ ಕಾರಣ ಮೂರೇ ವರ್ಷಕ್ಕೆ ಕಾಫಿನಾಡಲ್ಲಿ ಕೋಟ್ಪಾ ಕಾಯ್ದೆ ಕಳೆದೋಗಿದೆ.