ಚಿಕ್ಕಮಗಳೂರು : ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚಿಕ್ಕಮಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಅಭ್ಯರ್ಥಿ-ಪಾಲಕ ಪೋಷಕರಿಗೆ ಸಮಾಲೋಚನೆ, ಒಗ್ಗೂಡಿಸುವಿಕೆ ಉದ್ಯೋಗಮೇಳ ಕಾರ್ಯಕ್ರಮವನ್ನು ನಗರದ ಐಡಿಎಸ್‌ಜಿ ಕಾಲೇಜಿನ ಐಎಸ್ ಮಲ್ಲೇಗೌಡ ವೇದಿಕೆಯಲ್ಲಿ ನೆರವೇರಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್ ಚೈತ್ರಶ್ರೀ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನೀರು, ಆಹಾರ ಇತರೆ ಮೂಲಭೂತ ಸೌಲಭ್ಯಗಳಂತೆ ಉದ್ಯೋಗವೂ ಒಂದು ಮೂಲಭೂತ ಅವಶ್ಯಕಯಾಗಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಪಡೆದ ಅಂಕ ಮುಂದಿನ ವಿದ್ಯಾಬ್ಯಾಸದ ಜೀವನಕ್ಕೆ ದಾರಿಯಾಗುತ್ತದೆ. ವಿದ್ಯಾರ್ಥಿಗಳು ತಮಗೆ ಯಾವ ಕ್ಷೇತ್ರದ ಬಗ್ಗೆ ಒಲವಿರುತ್ತದೆಯೋ ಅದನ್ನೇ ಆಯ್ಕೆ ಮಾಡಿಕೊಂಡು ಆ ಮೂಲಕ ಸಾಧನೆ ಮಾಡಬೇಕು ಎಂದು ಹೇಳಿದ ಅವರು, ಸ್ವ ಉದ್ಯೋಗದ ಕುರಿತಾಗಿ ಮಾಹಿತಿ ಬೇಕಾಗಿದ್ದಲ್ಲಿ ಜಿಲ್ಲಾ ಪಂಚಾಯಿತಿಯನ್ನು ಸಂಪರ್ಕಿಸಬಹುದಾಗಿದೆ, ಈ ಬಗೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಸಿ.ಟಿ. ರವಿ ಅವರು ಜಗತ್ತಿನಲ್ಲಿ ಅತಿ ಹೆಚ್ಚು ಯುವಕರು ಇರುವ ದೇಶವೆಂದರೆ ಅದು ಭಾರತದಲ್ಲಿ ಮಾತ್ರ, ೩೫ ವರ್ಷದ ಒಳಗಿನ ಸುಮಾರು ೮೦ ಕೋಟಿ ಯುವ ಸಮುದಾಯದವರಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಎಲ್ಲರಿಗೂ ಉದ್ಯೋಗವನ್ನು ನೀಡಲು ಸಾಧ್ಯವಿಲ್ಲ ಆದರೆ, ಎಲ್ಲರೂ ಸ್ವಯಂ ಉದ್ಯೋಗಿಗಳಾಗುವಂತೆ ಯೋಜನೆ ರೂಪಿಸ ಬಹುದಾಗಿದೆ ಎಂದು ಹೇಳಿದರು. ಸ್ವ ಉದ್ಯೋಗದಲ್ಲಿ ಮೊದಲು ತರಬೇತಿ ನೀಡಲಾಗುತ್ತದೆ ನಂತರ ಐವತ್ತು ಸಾವಿರ ಹಣವನ್ನು ನೀಡಲಾಗುತ್ತದೆ ಅದರಲ್ಲಿ ೧೦ ಸಾವಿರ ಸಹಾಯಕ್ಕಾಗಿ ಹಾಗೂ ೪೦ ಸಾವಿರ ಹಣವನ್ನು ಸಾಲದ ರೂಪದಲ್ಲಿ ನೀಡಲಾಗುವುದು, ಉದ್ಯೋಗಾಕಾಂಕ್ಷಿಗಳು ಸಾಲಕ್ಕಾಗಿ ತರಬೇತಿಗೆ ಸೇರದೆ ಸ್ವ- ಉದ್ಯೋಗಿಗಳಾಗಬೇಕೆಂಬ ಉದ್ದೇಶ ಹೊಂದಿರಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಂಯೋಜನಾಧಿಕಾರಿಯಾದ ಡಿ.ಸಿ.ಷಡಕ್ಷರಪ್ಪ ಅವರು ಉದ್ಯೋಗದ ಕುರಿತು ಮಾಹಿತಿ ನೀಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ರೂಪಿಸಲ್ಪಟ್ಟ ಹಲವಾರು ಯೋಜನೆಗಳಲ್ಲಿ ರಾಜೀವ್ ಗಾಂಧಿ ಚೈತನ್ಯ, ಸ್ವಾವಲಂಭನಾ ಚೈತನ್ಯ, ಅಂಬೇಡ್ಕರ್ ನಿಗಮದಿಂದ, ಚೀಫ್ ಮಿನಿಸ್ಟರ್ ಗ್ಯಾರಂಟೀ ಸ್ಕೀಮ್, ಪಿ.ಎಂ ಗ್ಯಾರಂಟೀ ಸ್ಕೀಂ ಹಾಗೂ ಸಾಮಾಜಿಕಾ ಭದ್ರತಾ ಯೋಜನೆ ಇತ್ಯಾದಿಗಳಾಗಿವೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ ಹಾಗೂ ಅಟಲ್ ಫೆನ್ಶನ್ ಯೋಜನೆಗಳಲ್ಲಿ ವಿಮಾ ಸೌಲಭ್ಯಗಳಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಲಿಂಗರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎ.ಆರ್ ಮಹೇಶ್, ಉಪಾಧ್ಯಕ್ಷ ವೈ.ಜಿ ಸುರೇಶ್, ಜಿಲ್ಲಾ ಪಂಚಾಯಿತಿ ಜಾಗರ ಕ್ಷೇತ್ರದ ಸದಸ್ಯರಾದ ಜಸಂತಾ ಅನಿಲ್ ಕುಮಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾಲೇಜಿನ ಪ್ರಾಂಶುಪಾಲರು, ಉದ್ಯೋಗಾಕಾಂಕ್ಷಿಗಳು, ಎಸ್.ಬಿ.ಐ, ಕಾರ್ಪೊರೇಷನ್ ಬ್ಯಾಂಕ್ ಮತ್ತಿತರ ಸಂಸ್ಥಗಳ ಪ್ರತಿನಿಧಿಗಳು ಭಾಗವಹಿಸಿದ್ದವು.