ರೈತರ ಹಿತ ಸಂರಕ್ಷಣೆಗೆ ಅಗತ್ಯಕ್ರಮವಹಿಸಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೂಚನೆ

672

ಹಾಸನ : ಜಿಲ್ಲೆಯಲ್ಲಿ ಈ ಹಿಂದಿನ ಬರ ಹಾಗೂ ಆ ನಂತರ ನಿರಂತರವಾಗಿ ಸುರಿದ ಮಳೆ ಮತ್ತು ಕೀಟ ಬಾದೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆ ಬಗೆಹರಿಸಲು ಕೃಷಿ ಮತ್ತು ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಅಗತ್ಯ ಕ್ರಮವಹಿಸಬೇಕು ಎಂದು ಮಾಜಿ ಪ್ರಧಾನಿ ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಹೆಚ್.ಡಿ.ದೇವೇಗೌಡ ಅವರು ನಿರ್ದೇಶನ ನೀಡಿದರು. ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ರೈತರಿಗೆ ಅಗತ್ಯವಿರುವ ಮಾಹಿತಿ, ಬಿತ್ತನೆ ಬೀಜ, ರಸಗೊಬ್ಬರಗಳನ್ನು ಕಾಲಕಾಲಕ್ಕೆ ಪೂರೈಸಿ ಎಂದರು.

ಶಾಸಕರಾದ ಹೆಚ್.ಡಿ.ರೇವಣ್ಣ ಮತ್ತು ಕೆ.ಎಂ.ಶಿವಲಿಂಗೇಗೌಡ ಅವರು ಹಾಗೂ ಸಿ.ಎನ್.ಬಾಲಕೃಷ್ಣ ಅವರು ಸಭೆಯಲ್ಲಿ ಮಾತನಾಡಿ ಮುಂಗಾರು ವೈಫಲ್ಯ ಹಾಗೂ ಹಿಂಗಾರಿನಲ್ಲಿ ರಾಗಿ ಬೆಳೆಗೆ ಕಂಡು ಬಂದಿರುವ ವಿಚಿತ್ರ ಕೀಟ ಭಾದೆ ನಿಯಂತ್ರಣದ ಬಗ್ಗೆ ಕೃಷಿ ಇಲಾಖೆ ಏನಾದರೂ ಪರಿಹಾರ ಕಂಡು ಹಿಡಿಯಬೇಕು ಹತಾಶರಾಗಿರುವ ರೈತರಿಗೆ ಆತ್ಮ ವಿಶ್ವಾಸ ತುಂಬಬೇಕು ಎಂದು ಒತ್ತಾಯಿಸಿದರು. ಹಿರಿಸಾವೆಯಲ್ಲಿ ಬಾರಿ ಮಳೆಯಿಂದ ಗೋಡೆ ಕುಸಿದು ಸಾವಿಗೀಡಾದವರಿಗೆ ಶೀಘ್ರ ಪರಿಹಾರ ಒದಗಿಸ ಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅವರು ಮನವಿ ಮಾಡಿದರು.

ಅರಸೀಕೆರೆ ತಾಲ್ಲೂಕಿನಲ್ಲಿ ಬಹಳ ವರ್ಷಗಳ ನಂತರ ಹಿಂಗಾರಿನಲ್ಲಾದಂತೆ ಮಳೆಯಾಗಿದೆ ಆದರೆ ಸಾವಿರಾರು ಹೆಕ್ಟೇರ್‌ನಲ್ಲಿ ಬೆಳೆದ ರಾಗಿ ಕೈಗೆ ಬಾರದಂತೆ ಶೀಘ್ರವೇ ರೈತರಲ್ಲಿ ಪರಿಹಾರ ಕ್ರಮಗಳ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸಿ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಬಿತ್ತನೆ ಕಾಲವಾದ ಜೂನ್ ತಿಂಗಳಲ್ಲಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಯ ತೀವ್ರ ಕೊರತೆಯಾಗಿತ್ತು. ಈಗ ಹಿಂಗಾರಿನಲ್ಲಿ ಮಳೆ ಸುರಿದರೂ ರೈತರಿಗೆ ಅನುಕೂಲವಾಗದಂತಹ ಪರಿಸ್ಥಿತಿ ಉಂಟಾಗುತ್ತಿರುವುದು ಬೇಸರದ ಸಂಗತಿ. ಇನ್ನಷ್ಟು ತೊಂದರೆ ಎದುರಾಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಿ ಎಂದರು.

ಫಸಲ್ ಬಿಮಾ ಯೋಜನೆಗಳು ರೈತರಿಗೆ ನೆರವಾಗುವಂತಿರಬೇಕು. ರೈತರು ನಿಜವಾಗಿಯೂ ತೊಂದರೆಗೆ ಸಿಲುಕಿದಾಗ ವಿಮಾ ಸೌಕರ್ಯ ದೊರೆಯಬೇಕು. ಉಪವಿಭಾಗಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾವಹಿಸಿ ಎಂದು ದೇವೇಗೌಡ ಅವರು ಹೇಳಿದರು. ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಅವರು ಪ್ರತಿಕ್ರಿಯಿಸಿ ಫಸಲ್ ಬಿಮಾ ಯೋಜನೆ ಸ್ವರೂಪ ನಿಯಮಗಳು ರೈತರಿಗೆ ಆಗುತ್ತಿರುವ ತೊಂದರೆಗಳು, ಬ್ಯಾಂಕ್ ಸಾಲ ಪಡೆಯದೇ ಇರುವ ರೈತರಿಗೆ ಇದರ ಲಾಭ ದೊರೆಯದಿರುವ ಬಗ್ಗೆ ವಿವರಿಸಿದರು. ಜಿ.ಪಿ.ಎಸ್ ಆದಾರದ ಬೆಳೆ ಕಟಾವು ಸಮೀಕ್ಷೆಯಿಂದ ರೈತ ಖಂಡಿತ ತೊಂದರೆ ಎದುರಿಸಬೇಕಾಗುತ್ತದೆ. ರೈತರ ಹಿತಕಾಯುವುದು ಸರ್ಕಾರ ಹಾಗೂ ಕೃಷಿ ಇಲಾಖೆ ಜವಾಬ್ದಾರಿ ಎಂದು ಅವರು ಹೇಳಿದರು.

ಶಾಸಕರಾದ ಹೆಚ್.ಎಸ್.ಪ್ರಕಾಶ್ ಮತ್ತು ನಗರಸಭೆ ಅಧ್ಯಕ್ಷರಾದ ಡಾ|| ಹೆಚ್.ಎಸ್. ಅನಿಲ್ ಕುಮಾರ್ ಅವರು ಮಾತನಾಡಿ ಹಾಸನ ನಗರಕ್ಕೆ ಕುಡಿಯುವ ನೀರು ಪೂರೈಸುವ ಅಮೃತ್ ಯೋಜನೆ ಪೂರಕ ಅನುಷ್ಠಾನವಾಗಬೇಕು ಅಗತ್ಯವಿರುವ ಹೆಚ್ಚುವರಿ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು. ಅರಕಲಗೂಡು ರಸ್ತೆಕಾಮಗಾರಿ ನಡೆಯುತ್ತಿದೆ. ಅಮೃತ್ ಯೋಜನೆಯ ಪೈಪ್ ಲೈನ್ ಅಳವಡಿಸಲಾದ ನಂತರ ಡಾಂಬರ್ ಹಾಕಬೇಕು ಇಲ್ಲದಿದ್ದರೆ ಎರೆಡೆರಡುಬಾರಿ ಕೆಲಸ ಮಾಡಬೇಕಾಗುತ್ತದೆ ಎಂದು ಶಾಸಕರಾದ ಹೆಚ್.ಎಸ್.ಪ್ರಕಾಶ್ ಅವರು ತಿಳಿಸಿದರು.

ನಗರದ ವಿವಿಧ ವಾರ್ಡ್‌ಗಳಲ್ಲಿ ಪೈಪ್‌ಲೈನ್ ಅಳವಡಿಕೆ , ವಿಸ್ತರಣೆ, ರಸ್ತೆ ಮತ್ತಿತರ ಕಾಮಗಾರಿಗಳಿಗೆ ಮೀಸಲಿರಿಸುವ ೨೪ ಕೋಟಿ ರೂಪಾಯಿಗಳ ವೆಚ್ಚಕ್ಕೆ ಸಂಬಂದಿಸಿದಂತೆ ಯಾವುದೇ ಟೆಂಡರ್ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಈ ಬಗ್ಗೆ ತಕ್ಷಣ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕ್ರಮವಹಿಸುಬೇಕು ಎಂದು ಶಾಸಕರಾದ ಹೆಚ್.ಎಸ್.ಪ್ರಕಾಶ್ ಮತ್ತು ನಗರಸಭೆ ಅಧ್ಯಕ್ಷರಾದ ಡಾ|| ಹೆಚ್.ಎಸ್.ಅನಿಲ್ ಕುಮಾರ್ ಅವರು ಒತ್ತಾಯಿಸಿದರು. ಹಾಲಿ ಇರುವ ಶುದ್ದಿಕರಣ ಘಟಕವನ್ನು ಬಳಸಿ ಪೈಪ್‌ಲೈನ್‌ಳನ್ನು ಬದಲಿಸಿ ಪಂಪ್ ಸಾಮರ್ಥ್ಯ ಹೆಚ್ಚಿಸಿದಲ್ಲಿ ನಗರಕ್ಕೆ ಹೆಚ್ಚಿನ ನೀರು ಸರಬರಾಲು ಮಾಡಲು ಸಾಧ್ಯ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗಿದೆ. ಹೆಚ್ಚುವರಿ ಅನುದಾನ ಒದಗಿಸಿ ಎಂದು ನಗರಸಭೆ ಅಧ್ಯಕ್ಷರಾದ ಡಾ|| ಹೆಚ್.ಎಸ್.ಅನಿಲ್ ಕುಮಾರ್ ಅವರು ಮನವಿ ಮಾಡಿದರು.

ಶಾಸಕರಾದ ಹೆಚ್.ಕೆ.ಕುಮಾರಸ್ವಾಮಿ ಅವರು ಮಾತನಾಡಿ ಜಿಲ್ಲೆಯ ವಿವಿದೆಡೆ ಉತ್ತಮ ಮಳೆಯಾಗುತ್ತದ್ದರೂ ಯಗಚಿ ಹಾಗೂ ವಾಟೆಹೊಳೆ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಕೊರತೆ ಇದೆ. ಹಾಸನ ಮಾರನಹಳ್ಳಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಗುಂಡಿ ಬಿದಿದ್ದು ಸಂಚಾರ ದುಸ್ಥಿತಿರ ವಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯವರಿಗೆ ಈ ಬಗ್ಗೆ ಸಂಪರ್ಕಿಸಿದರೆ ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದ್ದು ಅವರೇ ನಿರ್ವಹಣೆ ಮಾಡಬೇಕು ಎಂದು ಉತ್ತರಿಸಿದ್ದಾರೆ ಆದರೆ ಈ ವರೆಗೂ ಗುಂಡಿ ಮುಚ್ಚುವ ಕೆಲಸ ಆಗಿಲ್ಲ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದರು.

ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಬ್ಯಾಂಕರ್‌ಗಳಿಗೆ ಇನ್ನೂ ಬಾಕಿ ಪಾವತಿಯಾಗದೇ ಇರುವ ಬಗ್ಗೆ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದರು. ಸೂಕ್ತ ತನಿಖೆ ನಡೆಸಿಯೇ ಶೀಘ್ರವಾಗಿ ಹಣ ಒದಗಿಸಿ ಎಂದು ಮನವಿ ಮಾಡಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಮಾತನಾಡಿ ಕುಡಿಯುವ ನೀರಿನ ಪೂರೈಕೆ ಬಿಲ್ ಪಾವತಿ ಬಗ್ಗೆ ಹಲವು ಬಾರಿ ಚರ್ಚೆಯಾಗಿದೆ. ಇದನ್ನು ಶೀಘ್ರ ಬಗೆಹರಿಸಿ ಎಂದರು. ಇದೇವೇಳೆ ಮಾಜಿ ಪ್ರಧಾನಿಯವರು ಸಂಸದರ ಆದರ್ಶ ಗ್ರಾಮ ಯೋಜನೆಯ ಅನುಷ್ಠಾನದ ಪ್ರಗತಿ ವಿವರಗಳನ್ನು ಅಧಿಕಾರಿಗಳಿಂದ ಪಡೆದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿಯವರು ಕುಡಿಯುವ ನೀರು ಪೂರೈಕೆ, ಬೆಳೆ ಕಟಾವು ಸಮೀಕ್ಷೆಗಳ ಬಗ್ಗೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್‌ವಾಡ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಕೆ.ಎಂ.ಜಾನಕಿ ಉಪಸ್ಥಿತರಿದ್ದರು. ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಪ್ರಗತಿ ವಿವರ ಒದಗಿಸಿದರು.

LEAVE A REPLY

Please enter your comment!
Please enter your name here