ಆಟೋಗಳಿಗೆ ತಾಲ್ಲೂಕು ವ್ಯಾಪ್ತಿಯಲ್ಲಿ ಸಂಚರಿಸಲು ಪರ್ಮಿಟ್‍ಗಳನ್ನು ನೀಡಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ ಆಟೋ ಚಾಲಕರು ಮತ್ತು ಮಾಲೀಕರ ಸಂಘ …

372
firstsuddi

ಚಿಕ್ಕಮಗಳೂರು -ಪ್ರಾದೇಶಿಕ ಸಾರಿಗೆ ಇಲಾಖೆ ಆಟೋಗಳಿಗೆ ಇದುವರೆಗೆ ನೀಡುತ್ತಿದ್ದ ಪದ್ದತಿಯಲ್ಲೇ ಮುಂದೆಯೂ ಪರ್ಮಿಟ್‍ಗಳನ್ನು ನೀಡಬೇಕು ಎಂದು ಶೃಂಗೇರಿ ಕ್ಷೇತ್ರದಚಾಲಕರು ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ ಲಕ್ಷ್ಮೀಪ್ರಸಾದ್, ಪ್ರಾದೇಶಿಕ ಸಾರಿಗೆ ಇಲಾಖೆಯ ಅಧೀಕ್ಷಕ ರಾಮಚಂದ್ರ ಮತ್ತು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರನ್ನು ಗುರುವಾರ ಭೇಟಿ ಮಾಡಿದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.ಪ್ರಾದೇಶಿಕ ಸಾರಿಗೆ ಇಲಾಖೆ ಇದುವರೆಗೆ ಆಟೋಗಳಿಗೆ ತಾಲ್ಲೂಕು ವ್ಯಾಪ್ತಿಯಲ್ಲಿ ಸಂಚರಿಸಲು ಪರ್ಮಿಟ್ ನೀಡುತ್ತಿತ್ತು, ಆದರೆ ಇತ್ತೀಚೆಗೆ ನಡೆದ ಖಾಸಗೀ ಬಸ್ ಮಾಲೀಕರ ಸಭೆಯಲ್ಲಿ ಇನ್ನು ಮುಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ಸಂಚರಿಸಲು ಪರ್ಮಿಟ್ ನೀಡಲು ನಿರ್ಧರಿಸಿದೆ ಎಂದು ತಿಳಿಸಿದರು.
ಆಟೋ ಚಾಲಕರು ಮತ್ತು ಮಾಲೀಕರೆಲ್ಲರೂ ಬಹುತೇಕ ಬಡವರು ಮತ್ತು ನಿರುದ್ಯೋಗಿಗಳಾಗಿದ್ದು ಅವರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೀಮಿತಗೊಳಿಸಿ ಪರ್ಮಿಟ್ ನೀಡಿದರೆ ಅವರು ಬಾಡಿಗೆ ದೊರಕದೆ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗುತ್ತಾರೆ, ಆಟೋಗಳನ್ನೇ ನಂಬಿ ಬದುಕುತ್ತಿರುವ ಅವರ ಕುಟುಂಬ ಬೀದಿ ಪಾಲಾಗುತ್ತದೆ ಎಂದು ಅಳಲು ತೋಡಿಕೊಂಡರು.ಇದುವರೆಗಿದ್ದ ಪದ್ದತಿಯಂತೆ ಆಟೋಗಳಿಗೆ ತಾಲ್ಲೂಕು ವ್ಯಾಪ್ತಿಯಲ್ಲಿ ಸಂಚರಿಸಲು ಪರ್ಮಿಟ್ ನೀಡಿದರೆ ಬಾಡಿಗೆ ದೊರೆತು ಚಾಲಕರು ಮತ್ತು ಮಾಲೀಕರು ಅಲ್ಪಸ್ವಲ್ಪ ಹಣಗಳಿಸಿ ಕುಟುಂಬದ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಹಿಂದಿದ್ದ ಪದ್ದತಿಯನ್ನು ರದ್ದುಪಡಿಸಬಾರದು ಆಟೋಗಳಿಗೆ ತಾಲ್ಲೂಕು ವ್ಯಾಪ್ತಿಯಲ್ಲಿ ಸಂಚರಿಸಲು ಪರ್ಮಿಟ್‍ಗಳನ್ನು ನೀಡಬೇಕು ಎಂದು ಆಗ್ರಹಿಸಿದರು.ಶೃಂಗೇರಿ ಕ್ಷೇತ್ರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಹೆಚ್.ಆರ್.ಜಗದೀಶ್, ಅಧ್ಯಕ್ಷ ಸದಾಶಿವ, ಕಾರ್ಯದರ್ಶಿ ಮಹೇಶ್ ಶೆಟ್ಟಿ, ಕೊಪ್ಪ ಆಟೋ ಚಾಲಕರ ಸಂಘದ ಅಧ್ಯಕ್ಷ ವಿಜಯಕುಮಾರ್, ನರಸಿಂಹರಾಜಪುರ ಸಂಘದ ಅಧ್ಯಕ್ಷ ರವಿಚಂದ್ರ, ಕಾರ್ಯದರ್ಶಿ ಎಂ.ಶಿವಮೂರ್ತಿ, ಚಿಕ್ಕಮಗಳೂರು ಚಾಲಕರ ಸಂಘದ ಅಧ್ಯಕ್ಷ ಎಂ.ಟಿ.ಜಗದೀಶ್, ಕುದ್ರೆಗುಂಡಿ ಅಧ್ಯಕ್ಷ ರಾಘು, ಸುರೇಂದ್ರಶೆಟ್ಟಿ, ಬಿ.ಹೆಚ್.ಕೈಮರ ಅಧ್ಯಕ್ಷ ನಾಗರಾಜ್, ಸಂದೇಶ್, ಆದರ್ಶ ಹಾಜರಿದ್ದರು.