ಕಾರ್ಖಾನೆಗಳು ಮತ್ತು ಅರಮನೆಗಳನ್ನು ಕಟ್ಟುವುದಕ್ಕಿಂತ ಮೊದಲು ಮನುಷ್ಯರ ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕು

461

ಚಿಕ್ಕಮಗಳೂರು : ಸಮಾಜದಲ್ಲಿಂದು ಅಭಿವೃದ್ದಿಯ ಹೆಸರಿನಲ್ಲಿ ಕಾರ್ಖಾನೆಗಳು ಮತ್ತು ಅರಮನೆಗಳನ್ನು ಕಟ್ಟುವುದಕ್ಕಿಂತ ಮೊದಲು ಮನುಷ್ಯರ ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕು ಎಂದು ಖ್ಯಾತ ತತ್ವಪದ ಗಾಯಕ ಯುಗಧರ್ಮದ ರಾಮಣ್ಣ ಸಲಹೆ ಮಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರದ ಪ್ರಥಮ ಪ್ರಜೆ ಶಿಲ್ಪಾ ರಾಜಶೇಖರ್ ಅವರ ಮನೆ ಅಂಗಳದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಚಿಂತನ ಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆಧುನೀಕರಣ ಮತ್ತು ಅಭಿವೃದ್ದಿಯ ಭರದಲ್ಲಿ ಸಮಾದಲ್ಲಿಂದು ಬೃಹತ್ ಕಾರ್ಖಾನೆಗಳನ್ನು ದೊಡ್ಡದೊಡ್ಡ ಸೌಧಗಳನ್ನು ನಿರ್ಮಿಸಲಾಗುತ್ತಿದೆ ಆದರೆ ಅದರ ನಡುವೆ ಮಾನವೀಯತೆ ಮರೆಯಾಗಿದೆ, ಮನುಷ್ಯರ ಮನಸ್ಸುಗಳು ಒಡೆದು ಹೋಗುತ್ತಿವೆ ಇದರಿಂದಾಗಿ ಕೂಡು ಕುಟುಂಬಗಳು ಕಣ್ಮರೆಯಾಗಿವೆ ಮನುಷ್ಯರು ದ್ವೇಷ, ಅಸೂಯೆ ಮುಂತಾದವುಗಳಿಂದ ಮಾನಸಿಕ ಶಾಂತಿ, ಸುಖ ಮತ್ತು ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ ಎಂದು ವಿಷಾದಿಸಿದರು. ಅರಮನೆ ಕಟ್ಟುವುದರಿಂದ ಯಾವುದೇ ಪ್ರಯೋಜನವಿಲ್ಲ, ಸಮಾಜದ ಅಭಿವೃದ್ದಿಯಾಗಬೇಕಾದರೆ ಮನುಷ್ಯರ ಮನಸ್ಸುಗಳನ್ನು ಕಟ್ಟಬೇಕು ಆಗ ಮಾನಸಿಕ ಶಾಂತಿ, ಸುಖ, ನೆಮ್ಮದಿ ದೊರೆಯುತ್ತವೆ. ಜನ ಒಗ್ಗೂಡಿ ಬಾಳುವಂತಹ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್ ನಾಡಿನಲ್ಲಿ ಕನ್ನಡ ಉಳಿಯಬೇಕಾದರೆ ಕನ್ನಡಿಗರು ಆಂಗ್ಲಭಾಷೆಯ ವ್ಯಾಮೋಹ ಬಿಡಬೇಕು, ಮಾತೃಭಾಷೆಯನ್ನು ಬಳಸುವ ಮೂಲಕ ಅದನ್ನು ಮುಂದಿನ ಪೀಳಿಗೆಗೂ ಉಳಿಸಬೇಕು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಆಧುನೀಕರಣದ ಭರದಲ್ಲಿ ಕಣ್ಮರೆಯಾಗುತ್ತಿರುವ ತತ್ಪಪದಗಳನ್ನು ಜನತೆಗೆ ಪರಿಚಯಿಸುವ ಮೂಲಕ ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಾಹಿತಿ ಬೆಳವಾಡಿ ಮಂಜುನಾಥ್, ನಗರಸಭೆ ಸದಸ್ಯ ಟಿ.ರಾಜಶೇಖರ್, ನಿವೃತ್ತ ಅಭಿಯಂತ ನಾರಾಯಣ ಮಲ್ಯ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಪ್ರಭು ಸೂರಿ, ಚಂಚಲಾ ಅಶೋಕ್ ಉಪಸ್ಥಿತರಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು, ಖಜಾಂಚಿ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್ ಸ್ವಾಗತಿಸಿದರು, ತಾಲ್ಲೂಕು ಕಸಾಪ ಕಾರ್ಯದರ್ಶಿ ಸುರೇಶ್ ವಂದಿಸಿದರು.

 

LEAVE A REPLY

Please enter your comment!
Please enter your name here