ಚಿಕ್ಕಮಗಳೂರು : ದೇಶದ ಸಂವಿಧಾನವನ್ನು ಯಥಾವತ್ತಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜನತೆ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಡಾ|| ಬಿ.ಎಲ್.ಶಂಕರ್ ಕರೆ ನೀಡಿದರು. ಯುವ ಕಾಂಗ್ರೇಸ್ ವಿಧಾನಸಭಾ ಕ್ಷೇತ್ರ ಸಮಿತಿ ನಗರದ ಜಿಲ್ಲಾ ಕಾಂಗ್ರೇಸ್ ಕಛೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಚುನಾವಣೆ ಪೂರ್ವಸಿದ್ದತಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಕಳೆದ ನಾಲ್ಕು ವರ್ಷಗಳಲ್ಲಿ ಸತತವಾಗಿ ಸಂವಿದಾನ ವಿರೋಧಿ ಚಟುವಟಿಕೆಗಳನ್ನು ನಡೆಸಿದೆ, ಆ ಪಕ್ಷದ ನಾಯಕರ ನಡೆ ಸಂವಿಧಾನ ವಿರೋಧಿಯಾಗಿದೆ, ಸಂವಿಧಾನವನ್ನು ಬದಲಿಸುವ ಕುರಿತು ಅವರು ಈಗಾಗಲೇ ಮಾತನಾಡುತ್ತಿದ್ದಾರೆ ಎಂದರು. ಬಿಜೆಪಿ ಈಗಾಗಲೇ ಅನೇಕ ರಾಜ್ಯಗಳನ್ನು ವ್ಯಾಪಿಸಿದೆ, ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲೂ ಗೆದ್ದರೆ ಅದು ಬಲಿಷ್ಠವಾಗುತ್ತದೆ, ಆ ಪಕ್ಷದ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸುವವರೇ ಇಲ್ಲದಂತಾಗುತ್ತದೆ, ಹೇಳುವವರು ಮತ್ತು ಕೇಳುವವರೇ ಇಲ್ಲದಂತಾಗುವುದರಿಂದ ಮುಂದೊಂದು ದಿನ ಸಂವಿಧಾನದ ಬದಲಾವಣೆಗೆ ಬಿಜೆಪಿ ಮುಂದಾಗುತ್ತದೆ ಎಂದು ಎಚ್ಚರಿಸಿದರು. ಇದನ್ನು ದೇಶ ಮತ್ತು ರಾಜ್ಯದ ಜನತೆ, ಪಕ್ಷದ ಕಾರ್ಯಕರ್ತರು ಗಂಭೀರವಾಗಿ ತೆಗೆದುಕೊಳ್ಳಬೇಕು, ಸಂವಿಧಾನವನ್ನು ರಕ್ಷಿಸುವ ನಿಟ್ಟಿನಲ್ಲಿ ಮುಂದಿನ ಚುನಾವಣೆಗಳಲ್ಲಿ ಶತಾಯಗತಾಯ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಲೇ ಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಡಾ|| ಡಿ.ಎಲ್.ವಿಜಯ್‍ಕುಮಾರ್ ಮಾತನಾಡಿ ಯುವ ಕಾಂಗ್ರೇಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಚುನಾವಣೆಯಲ್ಲಿ ಪಕ್ಷಕ್ಕಾಗಿ ಸಮರೋಪಾದಿಯಲ್ಲಿ ದುಡಿಯಬೇಕು, ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಕಿವಿಮಾತು ಹೇಳಿದರು. ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ರಾಹಿಲ್ ಶರೀಫ್ ಯುವ ಕಾಂಗ್ರೇಸ್‍ನ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದರು.
ಅರಣ್ಯ, ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್, ಕೆಪಿಸಿಸಿ ಕಿಸಾನ್ ಸೆಲ್‍ನ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್, ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಕೆ.ವಿ.ಶಿವಕುಮಾರ್, ಪಕ್ಷದ ಮುಖಂಡರಾದ ಎಂ.ಸಿ.ಶಿವಾನಂದ ಸ್ವಾಮಿ, ಯಶೋಧ, ಮಂಜೇಗೌಡ, ಸಿ.ಸಿ.ಮಧು, ಬಿ.ಎಸ್.ಆದಿತ್ಯ, ಜೆ.ವಿನಾಯಕ, ಈಶ್ವರ್, ನಯಾಜ್, ಆದಿಲ್, ಎನ್.ಎಸ್.ಚೇತನ್ ಉಪಸ್ಥಿತರಿದ್ದರು.