ಆಕೆಗೆ ಇಪ್ಪತ್ತೊಂದು ವರ್ಷ. ಇಟಲಿಯ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ. ಆಕೆಯ ಅನಾರೋಗ್ಯ ಸಮಸ್ಯೆಯೇ ಬಹಳ ವಿಚಿತ್ರವಾಗಿಯೂ ವೈದ್ಯಕೀಯ ಲೋಕಕ್ಕೆ ಸವಾಲಾಗಿಯೂ ಇದೆ. ಏನು ಆಕೆಯ ಸಮಸ್ಯೆ ಅಂತೀರಾ? ಬೆವರಿದರೆ ಹಣೆ, ಕೈ- ಕಾಲುಗಳ ಮೇಲೆ ನೀರಾಗಿ ಹರಿಯುವುದನ್ನು ನೋಡಿರ್ತೀರಿ. ಆದರೆ ಈಕೆ ಬೆವರಿದರೆ ಮುಖ, ಕೈಗಳ ಮೇಲೆ ರಕ್ತ ಹರಿಯುತ್ತದೆ.
ವೈದ್ಯಲೋಕದ ಅದ್ಭುತ; ಯುವತಿಗೆ ಹುಡುಗನ ಕೈಗಳ ಕಸಿ
ಫ್ಲೋರೆನ್ಸ್ ವಿಶ್ವವಿದ್ಯಾಲಯದ ವೈದ್ಯರು ನೀಡಿದ ಮಾಹಿತಿ ಪ್ರಕಾರ ಹೇಳುವುದಾದರೆ, ಕಳೆದ ಮೂರು ವರ್ಷದಿಂದ ಆಕೆ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ವೈದ್ಯರಂತೂ ರಕ್ತ ಎಲ್ಲಾದರೂ ಬೆವರಿನ ರೀತಿ ಬರುವುದಕ್ಕೆ ಸಾಧ್ಯವಾ ಎಂದು ಅಚ್ಚರಿ ಪಟ್ಟಿದ್ದಾರೆ. ಇನ್ನೂ ಕೆಲವರು ಬೇರೇನೋ ಕಾಯಿಲೆ ಈಕೆಗಿದೆ. ಅದನ್ನು ಮುಚ್ಚಿಟ್ಟುಕೊಂಡು ಸುಳ್ಳು ಹೇಳುತ್ತಿದ್ದಾಳೆ ಅಂತ ಕೂಡ ಅಭಿಪ್ರಾಯ ಪಟ್ಟಿದ್ದಾರೆ.
ಆ ಮಹಿಳೆ ಮಲಗಿರುವ ವೇಳೆ, ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ವೇಳೆ ಹೀಗೆ ಯಾವಾಗಲಾದರೂ ರಕ್ತ ಬೆವರಿನಂತೆ ಸುರಿಯುತ್ತದೆ. ಈ ಬಗ್ಗೆ ಕೆನಡಾ ಮೆಡಿಕಲ್ ಅಸೋಸಿಯೇಷನ್ ನ ನಿಯತಕಾಲಿಕೆಯಲ್ಲಿ ಈಚೆಗೆ ಲೇಖನ ಕೂಡ ಪ್ರಕಟವಾಗಿದೆ. ಈ ರೀತಿ ರಕ್ತ ಹರಿಯುವುದು ತೀರಾ ಹೆಚ್ಚಾಗಿ ಕೂಡ ಆಗುತ್ತದೆ ಎಂದು ಆಕೆ ಹೇಳಿದ್ದಾರೆ.
ಒತ್ತಡ ಹೆಚ್ಚಾಗಿ ಕಂಡುಬಂದಾಗ ಈ ರೀತಿ ರಕ್ತ ಬೆವರು ಹರಿಯುವುದು ಒಂದರಿಂದ ಐದು ನಿಮಿಷದವರೆಗೆ ಇರುತ್ತದೆ. ಈ ರೀತಿ ಆಗಿ ಮುಜುಗರ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಆ ಮಹಿಳೆ ಒಂಟಿಯಾಗಿಯೇ ಹೆಚ್ಚು ಸಮಯ ಕಳೆಯುತ್ತಾರೆ. ತೀವ್ರ ಖಿನ್ನತೆ ಹಾಗೂ ಭಯದ ಸಮಸ್ಯೆಯಿಂದ ಹೀಗೆ ಆಗುತ್ತಿರಬಹುದು ಎಂದು ವೈದ್ಯರು ಹೇಳಿದ್ದಾರೆ.