ದೆಹಲಿ: ಚುನಾವಣೆಗಳಲ್ಲಿ ಕಳಂಕಿತ ರಾಜಕಾರಣಿಗಳ ಸ್ಪರ್ಧೆಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ತೀರ್ಪು ನೀಡಿದ್ದಾರೆ. ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವವರ ಸ್ಪರ್ಧೆಗೆ ನಿರ್ಬಂಧ ಹೇರಬೇಕು ಮತ್ತು ಅಂತಹ ಅಭ್ಯರ್ಥಿಗಳನ್ನು ಅನರ್ಹಗೊಳಿಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಪರಾಧ ಪ್ರಕರಣಗಳಲ್ಲಿ ಆರೋಪ ಹೊತ್ತ ಶಾಸಕರು ಅಥವಾ ಸಂಸದರನ್ನು ಆರೋಪ ಸಾಬೀತಾಗುವ ಮೊದಲೇ ಅವರನ್ನು ಆ ಸಾಂವಿಧಾನಿಕ ಹುದ್ದೆಗಳಿಂದ ಅನರ್ಹಗೊಳಿಸಬಾರದು ಎಂದು ಮಹತ್ವದ ತೀರ್ಪು ನೀಡಿದೆ. ಭ್ರಷ್ಟಾಚಾರ ಎಂಬುದು ಆರ್ಥಿಕ ಭಯೋತ್ಪಾದನೆಯಾಗಿದೆ. ಇದನ್ನು ಮಟ್ಟ ಹಾಕುವುದು ಮತದಾರರ ಕೈಯಲ್ಲಿದೆ ಎಂದು ದೀಪಕ್ ಮಿಶ್ರಾ ಹೇಳಿದ್ದಾರೆ.










