ಚಿಕ್ಕಮಗಳೂರು : ಆಂತರಿಕ ಒಪ್ಪಂದಂತೆ 20 ತಿಂಗಳ ಬಳಿಕ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡದೆ, ಪಂಚಾಯತ್ ರಾಜ್ ವ್ಯವಸ್ಥೆಯ ಕಾನೂನನ್ನ ದುರುಪಯೋಗಪಡಿಸಿಕೊಂಡು, ಮೀಸಲು ಕ್ಷೇತ್ರ ಮೂಡಿಗೆರೆ ಟಿಕೆಟ್ ಕೊಡಿ, ಇಲ್ಲ 30 ರಾಜೀನಾಮೆ ಕೊಡೋದಿಲ್ಲ ಎಂದು ಹುಂಬತನ ಪ್ರದರ್ಶಿಸಿದ್ದ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್‍ರನ್ನ ಬಿಜೆಪಿ ಪಕ್ಷ ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದೆ. ಜನವರಿ 4ನೇ ತಾರೀಖಿನಂದೇ ಚೈತ್ರಶ್ರೀ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದ್ರೆ, ಇವರು, ಮೂಡಿಗೆರೆ ಟಿಕೆಟ್‍ಗೆ ಡಿಮ್ಯಾಂಡ್ ಮಾಡಿಕೊಂಡು, ರಾಜೀನಾಮೆ ನೀಡಿರಲಿಲ್ಲ. ಆದ್ರೆ, ಇಂದು ವ್ಯಕ್ತಿಗಿಂತ ಪಕ್ಷ ದೊಡ್ಡದ್ದು ಎಂಬ ಬಿಜೆಪಿಯಲ್ಲಿ ಚೈತ್ರಶ್ರೀಯನ್ನ ಆರು ವರ್ಷಗಳ ಕಾಲ ಅಮಾನತು ಮಾಡಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರೋ ಚೈತ್ರಶ್ರೀ ನಾನು ಮಾಡಿರೋ ತಪ್ಪಾದ್ರು ಏನು ಎಂದು ಪಕ್ಷದ ಮುಖಂಡರಿಗೆ ಪ್ರಶ್ನಿಸಿದ್ದಾರೆ. ಚೈತ್ರಶ್ರೀಗೆ ಪ್ರಧಾನಿ ಮೋದಿ ಕಚೇರಿಯಿಂದ ಕರೆ ಬಂದಿರೋದ್ರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಸಂಸದೆ ಶೋಭಾ ವಿರುದ್ಧವು ಅಸಮಾಧಾನ ವ್ಯಕ್ತಪಡಿಸಿರೋ ಚೈತ್ರಶ್ರೀ ದಾಖಲೆ ಬಿಡುಗಡೆ ಮಾಡೋದಾಗಿ ಹೇಳಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿರೋರಿಗೆಲ್ಲಾ ಪಕ್ಷದಲ್ಲಿ ಒಳ್ಳೆ ಸ್ಥಾನ ಸಿಕ್ಕಿದೆ. ನಾನು ಅಂತಹಾ ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಟಿಕೆಟ್ ಕೇಳಿದ್ದೇ ತಪ್ಪಾ ಎಂದು ಪಕ್ಷವನ್ನ ಪ್ರಶ್ನಿಸಿದ್ದಾರೆ. ತಳ ಸಮುದಾಯದ ಮಹಿಳೆ ಎಂದು ತುಳಿಯಲು ಪ್ರಯತ್ನ ಮಾಡುತ್ತಿದ್ದಾರೆಂದು ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ರಾಜ್ಯ ಹಾಗೂ ರಾಷ್ಟ್ರದ ಮುಖಂಡರನ್ನ ಭೇಟಿ ಮಾಡೋದಾಗಿ ತಿಳಿದಿದ್ದಾರೆ.