ಮಂಗಳೂರು : ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಕೊಲೆಯನ್ನು ಸಿಎಂ ಸಿದ್ದರಾಮಯ್ಯ ವ್ಯವಸ್ಥಿತವಾಗಿ ಮುಚ್ಚಿ ಹಾಕಿದ್ದಾರೆಂದು ಯುವ ಬ್ರಿಗೇಡ್ ಪ್ರಮುಖ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಸರಣಿಯಾಗಿ ನಡೆದಿರುವ ಹಿಂದು ಕಾರ್ಯಕರ್ತರ ಕೊಲೆಗಳ ಬಗ್ಗೆ ರಚಿಸಿದ ಹಡೆದವ್ವನ ಶಾಪ ಎನ್ನುವ ಪುಸ್ತಕ ಬಿಡುಗಡೆಗೊಳಿಸಿ ಮಂಗಳೂರಿನಲ್ಲಿ ಸೂಲಿಬೆಲೆ ಮಾತನಾಡಿದ್ರು. ಕಲಬುರ್ಗಿಯಲ್ಲಿ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ರೌಡಿಗಳ ಎನ್ ಕೌಂಟರ್ ಗೆಂದು ಹೋಗಿದ್ದರು. ಆದರೆ ಅಧಿಕಾರಿಯೇ ಹೆಣವಾಗಿ ಬಂದ್ರು. ಜೊತೆಗಿದ್ದವರೇ ಮಲ್ಲಿಕಾರ್ಜುನ ಬಂಡೆಯನ್ನು ಕೊಂದಿದ್ದರು. ಆದರೆ ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಪತ್ತೆಹಚ್ಚುವ ಬದಲು ಕೇಸನ್ನೇ ಕ್ಲೋಸ್ ಮಾಡಿದ್ರು. ಡಿ.ಕೆ. ರವಿ ಪ್ರಕರಣದಲ್ಲಿಯೂ ಸಿಎಂ ಸಿದ್ದರಾಮಯ್ಯ ಇದೇ ನೀತಿ ಅನುಸರಿಸಿದ್ರು. ಆನಂತ್ರ ಡಿವೈಎಸ್ಪಿ ಗಣಪತಿ ತನಗೆ ಮೂವರು ಕಿರುಕುಳ ಕೊಟ್ಟವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡರು. ಆದರೆ ಸಿದ್ದರಾಮಯ್ಯ ಮಾತ್ರ ಅದು ಸಹಜ ಸಾವೆಂದು ಹೇಳಿ ಸರ್ಟಿಫಿಕೇಟ್ ಕೊಟ್ಟರು. ಮೊನ್ನೆ ಬೆಂಗಳೂರಿನಲ್ಲಿ ಕಳ್ಳನೊಬ್ಬ ಪೊಲೀಸ್ ಅಧಿಕಾರಿಯ ಕೈಗೆ ಹೊಡೆದು ಪಿಸ್ತೂಲ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದ. ಹೀಗಾದ್ರೆ ರಾಜ್ಯದ ಪೊಲೀಸರ ಪರಿಸ್ಥಿತಿ ಎಲ್ಲಿ ಮುಟ್ಟಿದೆ ಹೇಳಿ. ಈಗ ಕೊಲೆಗಡುಕರನ್ನು ಮುಗ್ಧರು ಅಂತ ಪ್ರತ್ಯೇಕಿಸಿ ಬಿಡುಗಡೆ ಮಾಡುತ್ತಿದ್ದಾರೆ. ಹಾಗಾದ್ರೆ ಈ ಪೊಲೀಸ್ ವ್ಯವಸ್ಥೆ ಯಾಕೆ ಬೇಕು. ಜೀವ ಬಲಿಕೊಟ್ಟು ರೌಡಿಗಳನ್ನು ಹಿಡಿಯುವ ಅಗತ್ಯ ಏನಿದೆ. ಇಂಥ ಎಡವಟ್ಟಿಗೆ ಸಿಎಂ ಸಿದ್ದರಾಮಯ್ಯ ಒಬ್ಬರೇ ಕಾರಣ ಅಂತಾ ಸೂಲಿಬೆಲೆ ಹೇಳಿದ್ರು.