ಮಲೆನಾಡಿನಲ್ಲಿ ಧಾರಾಕಾರ ಮಳೆ ಹಿನ್ನೆಲೆ ಶೇ 60 ರಷ್ಟು ಕಾಫಿ ಬೆಳೆ ಮಣ್ಣುಪಾಲು…

1608
  • ರಾಘವೇಂದ್ರ ಕೆಸವಳಲು

ಚಿಕ್ಕಮಗಳೂರು- ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಸುರಿದ ಧಾರಾಕಾರ ಮಳೆ ಸಾಕಷ್ಟು ಅವಾಂತರಗಳನ್ನ ಸೃಷ್ಟಿಸಿದೆ. ಮಳೆ ಬಯಲುಸೀಮೆಯಲ್ಲಿ ಒಂದೆಡೆ ಸಂತಸ ಮೂಡಿಸಿದ್ರೆ, ಕಾಫಿ ಬೆಳೆಗಾರರಿಗೆ ಮಾತ್ರ ನುಂಗಲಾರದ ಬಿಸಿ ತುಪ್ಪವಾಗಿದೆ. ಮಲೆನಾಡು ಭಾಗದಲ್ಲಿ ಸುರಿದ ಭಾರಿ ಮಳೆಗೆ ಕಾಫಿ ಕಾಯಿಗಳು ಉದುರುತ್ತಿದ್ದು, ಅಪಾರ ಬೆಳೆ ನಷ್ಟ ಸಂಭವಿಸುತ್ತಿದೆ. ಈಗಾಗಲೇ ಕಾಫಿ ಬೆಲೆ ಕುಸಿತವಾಗಿರೋದ್ರಿಂದ ಕಾಫಿ ಬೆಳೆಗಾರರು ಆತಂಕದಲ್ಲಿದ್ದು ಈಗ ಮಳೆಯಿಂದ ಕಾಳುಗಟ್ಟಿದ ಕಾಫಿ ಉದುರುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಧಾರಾಕಾರ ಮಳೆಗೆ ಶೇಕಡ 60 ರಷ್ಟು ಕಾಫಿ ಕಾಯಿಗಳು ನೆಲಕಚ್ಚಿವೆ.

ಮಲೆನಾಡು ಭಾಗಗಳಾದ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ, ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಸುರಿದ ಮಳೆಗೆ ಭಾರಿ ಪ್ರಮಾಣದ ಕಾಫಿ ಬೆಳೆ ಹಾನಿಯಾಗಿದ್ದು. ಒಂದು ತಿಂಗಳಿನಿಂದ ಎಡಬಿಡದೇ ಸುರಿದ ಭಾರಿ ಮಳೆಗೆ ಕಾಫಿ ಗಿಡಗಳಲ್ಲಿ ಕಾಳುಗಟ್ಟಿದ ಕಾಫಿ ಕಾಯಿಗಳು ನೆಲಕಚ್ಚಿದೆ. ಶೇ 60 ರಷ್ಟು ಕಾಫಿ ಕಾಯಿಗಳು ನೆಲಕ್ಕುರುಳಿರೋದ್ರಿಂದ ಕಾಫಿ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಮೂಡಿಗೆರೆ, ಶೃಂಗೇರಿ, ಕೊಪ್ಪ ಹಾಗೂ ಎನ್,ಆರ್.ಪುರ ಭಾಗದಲ್ಲಿ ರೋಬೊಸ್ಟೋ ಕಾಫಿ ಹೆಚ್ಚು ನೆಲಕಚ್ಚಿದೆ, ಅಲ್ಲದೆ ಕಾಫಿ ಎಲೆಗಳು ಕೂಡ ಉದುರುತ್ತಿವೆ, ಈ ಸಮಯದಲ್ಲಿ ಕಾಫಿ ಈಚಾಗಿದ್ದ ಕಾಫಿ ಕಾಯಿಗಳು ನೆಲಕ್ಕೆ ಬಿದ್ದು ಸಂಪೂರ್ಣ ಕೊಳೆತು ಹೋಗಿದ್ದು. ಇನ್ನು ಈ ವರ್ಷದ ಮಳೆ ನಮ್ಮ ಬದುಕನ್ನ ಹಾಳು ಮಾಡಿದೆ ಅಂತಾರೆ ಕಾಫಿ ಬೆಳೆಗಾರರು.

ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಕಾಫಿ ಬೆಳೆಗಾರರಾದ ಸುಧೀರ್, ದಾರದಹಳ್ಳಿ ಚಿಕ್ಕಮಗಳೂರು ತಾಲೂಕಿನಲ್ಲಿ 10 ಸಾವಿರ ಎಕರೆ ಪ್ರದೇಶದಲ್ಲಿರುವ ಅರೇಬಿಕಾ ಕಾಫಿ ಕೂಡ ಹಾನಿಯಾಗಿದೆ. ಈಗಾಗಲೇ ಶೇಕಡ 60 ಪರ್ಸೆಂಟ್ ಕಾಫಿ ಕಾಳುಗಳು ಉದುರಿದ್ದು ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ನೂರಾರು ಕಾಫಿ ಗಿಡಗಳು ಈ ಬಾರಿ ಕಾಂಡಕೊರಕ ರೋಗಕ್ಕೆ ತುತ್ತಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದಲ್ಲದೇ ಈಗ ಮತ್ತೇ ಮಳೆಯಿಂದ ಕಾಫಿ ಬೀಜ ನೆಲಕಚ್ಚಿರೋದು ಕಾಫಿ ಬೆಳಗಾರರಲ್ಲಿ ನುಂಗಲಾರದ ಬಿಸಿ ತುಪ್ಪವಾಗಿದೆ. ಕಾಫಿ ಬೆಳೆ ಹಾನಿಯಾಗಿದ್ರು ಕೂಡ ಕಾಫಿ ಮಂಡಳಿಯಾಗಲಿ,ಸರ್ಕಾರವಾಗಲಿ ಇತ್ತ ಗಮನ ಹರಿಸಿಲ್ಲ. ಒಟ್ಟಾರೆ, ಕಳೆದ ಒಂದು ತಿಂಗಳಿನಿಂದ ಸುರಿದ ಮಳೆ ಕೆಲ ರೈತರಿಗೆ ಸಂತಸ ಮೂಡಿಸಿದ್ರೆ, ಕಾಫಿ ಬೆಳೆಗಾರರಿಗೆ ಮಾತ್ರ ದೊಡ್ಡ ತಲೆನೋವಾಗಿದೆ. ಮಳೆಯಿಂದ ಕಾಫಿ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದು ಸಂಬಂಧಪಟ್ಟ ಅಧಿಕಾರಿಗಳು ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಹಾರ ನೀಡ್ತಾರಾ ಕಾದುನೋಡಬೇಕಾಗಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಲಾದರೂ ಕಾಫಿ ಬೆಳೆಗಾರರ ಸಮಸ್ಯೆ–ನೋವಿಗೆ ಸ್ಪಂದಿಸಬೇಕಾಗಿದೆ ಎಂದರು.