ಬಾಳೆಹೊನ್ನೂರು ಸಮೀಪದ ಭದ್ರಾ ನದಿಯಲ್ಲಿ ಮೊಸಳೆಗಳ ಕಾಟ, ಹೇಗಿವೆ ಗೊತ್ತಾ ಮೊಸಳೆಗಳು

1292

ಬಾಳೆಹೊನ್ನೂರು : ಯಾರಾದ್ರು ಈ ಕಡೆ ಬಂದ್ರೆ ಒಂದೇ ಏಟು… ಒಂದೇ ತುತ್ತು… ಲಬಕ್ ಸ್ವಾಹಾ ಮಾಡಿಬಿಡ್ತೇನೆ ಅಂತ ರಾಜಾರೋಷವಾಗಿ ಮೊಸಳೆ ಮಹಾರಾಜ ಹೀಗೆ ಮಲಗಿರೋದು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಭದ್ರೆಯ ತಟದಲ್ಲಿ. ಇಲ್ಲಿ ಇದೊಂದೇ ಮೊಸಳೆ ಇಲ್ಲ. ಇರೋದ್ರಲ್ಲಿ ಇದೇ ಚಿಕ್ಕದ್ದು. ಆರು ಅಡಿ ಉದ್ದದಿಂದ 15 ಅಡಿಯವರೆಗೆ ಉದ್ದವಿರೋ ಇನ್ನೂ ಏಳೆಂಟು ಮೊಸಳೆಗಳಿವೆ. ಬಾಳೆಹೊನ್ನೂರಿನ ಭದ್ರಾ ನದಿಯ ದಡದಲ್ಲಿ ಆಗಿಂದಾಗ್ಗೆ ಅಲ್ಲಲ್ಲೇ ಬಂದು ಹೀಗೆ ಮಲಗುತ್ವೆ. ಉಭಯವಾಸಿ ಪ್ರಾಣಿಯಾಗಿರೋ ಮೊಸಳೆ ಯಾವಾಗ ಎಲ್ಲಿರುತ್ತೋ ಅಂತ ಹೆದರಿ, ಸ್ಥಳಿಯರ್ಯಾರು ಹೊಲ-ಗದ್ದೆ-ತೋಟಗಳಿಗೆ ಹೋಗ್ತಿಲ್ಲ. ನದಿ ಬಳಿಯೂ ಬರ್ತಿಲ್ಲ.

ಈ ಬಗ್ಗೆ ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ತಿಲ್ಲ ಅಂತಾರೆ ಸ್ಥಳಿಯರು. ಸಾಲದಕ್ಕೆ ಇಲ್ಲಿ ಮೊಸಳೆಗಳಿರೋದು ಅರಣ್ಯ ಇಲಾಖೆಗೂ ಗೊತ್ತು. ಬಾಳೆಹೊನ್ನೂರಿನ ಕೋಳಿ-ಮಾಂಸದಂಗಡಿಯವ್ರಿಗೂ ಗೊತ್ತು. ಅಂಗಡಿಗಳಲ್ಲಿ ಕ್ಲೀನ್ ಮಾಡಿದ ಕೋಳಿ-ಕುರಿಯ ವೇಸ್ಟ್‍ಗಳನ್ನ ಅಂಗಡಿಯವ್ರು ತಂದು ನದಿಗೆ ಹಾಕ್ತಿರೋದ್ರಿಂದ ಮೊಸಳೆಗಳು ಹೆಚ್ಚಾಗಿವೆ ಅಂತಾರೆ ಸ್ಥಳಿಯರು. ಪ್ರತಿ ದಿನ ಹುಡುಕಾಡದಂತೆ, ಹೋರಾಡದಂತೆ ಆಹಾರ ಸಿಗ್ತಿರೋದ್ರಿಂದ ಮೊಸಳೆಗಳು ಮುಂದಕ್ಕೂ ಹೊಗ್ತಿಲ್ಲ. ಹಿಂದಕ್ಕೂ ಹೋಗ್ತಿಲ್ಲ. ಬಾಳೆಹೊನ್ನೂರು ನಗರದ ಬ್ರಿಡ್ಜ್ ಕೆಳಗೆಯೇ ವಾಸ ಮಾಡ್ತಿವೆ. ಸ್ಥಳಿಯರು ಸಾಕಷ್ಟು ಬಾರಿ ಕೋಳಿ ಅಂಗಡಿಯವ್ರಿಗೆ ಇಲ್ಲಿಗೆ ಕೋಳಿಗಳ ವೇಸ್ಟ್ ಹಾಕಬೇಡಿ ಎಂದು ಹೇಳಿದ್ರು ಯಾರೂ ಕೇಳ್ತಿಲ್ವಂತೆ. ಮತ್ತೆ ತಂದು ಇಲ್ಲಿಗೆ ಸುರಿಯುತ್ತಾರಂತೆ.

ಈ ಬಗ್ಗೆ ಸ್ಥಳಿಯರು ಅರಣ್ಯ ಇಲಾಖೆ ಗಮನಕ್ಕೂ ತಂದ್ರು ಅವ್ರು ಕೂಡ ಯಾವುದೇ ರೀತಿಯ ಕ್ರಮಕೈಗೊಳ್ಳದಿರೋದ್ರಿಂದ ಕ್ರಮೇಣ ಮೊಸಳೆಗಳ ಸಂಖ್ಯೆ ಜಾಸ್ತಿಯಾಗಿದೆ ಎಂದು ಸ್ಥಳಿಯರು ಮಾಂಸದಂಗಡಿ ಮಾಲೀಕರು ಹಾಗೂ ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಲಿ, ಸಿಂಹ, ಚಿರತೆ ಕೈಗೆ ಸಿಕ್ಕಿಬಿದ್ರು ತಪ್ಪಿಸಿಕೊಳ್ಬೋದು. ಆದ್ರೆ, ನೀರೊಳಗೆ, ದಡದ ಬಳಿ ಮೊಸಳೆ ಕೈಗೆ ಸಿಕ್ರೆ ಮುಗೀತು, ಫೋಟೋಗೆ ಹೂವಿನ ಹಾರ ಗ್ಯಾರಂಟಿ.

ಸ್ಥಳಿಯರು ಹೇಳೋ ಪ್ರಕಾರ ಕೋಳಿ-ಮಾಂಸದಂಗಡಿಯವ್ರು ವೇಸ್ಟ್ ಹಾಕ್ತಿದ್ರೆ ಕೂಡಲೇ ನಿಲ್ಲಿಸಬೇಕು. ಯಾಕಂದ್ರೆ, ಎಲ್ಲರಿಗೂ ಭಯ ಇರುತ್ತೆ. ಎಲ್ಲರದ್ದೂ ಜೀವಾನೆ. ಅನಾಹುತವೊಂದು ನಡೆದ ಮೇಲೆ ಕ್ರಮ ಕೈಗೊಳ್ಳೋ ಬದಲು, ಅರಣ್ಯ ಇಲಾಖೆ ಕೂಡ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸ್ಥಳಿಯರ ಆತಂಕವನ್ನ ದೂರಮಾಡಬೇಕಿದೆ.