ಜೆಡಿಎಸ್ – ಬಿಎಸ್ ಪಿ ಮೈತ್ರಿ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಏನು ಪ್ರತಿಕ್ರಿಯೆ ನೀಡಿದ್ದಾರೆ ಗೊತ್ತಾ ?

1116
firstsuddi

ಮಂಡ್ಯ: ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳನ್ನು ಒಂದುಗೂಡಿಸುವ ಸಲುವಾಗಿ ಬಿಎಸ್‍ಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಇಬ್ಬರು ನಾಯಕರು ಬಿಎಸ್‍ಪಿ ಜೊತೆಗಿನ ಮೈತ್ರಿ ಬಗ್ಗೆ ಸ್ಪಷ್ಟಪಡಿಸಿರು.

ಈ ವೇಳೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಇಪ್ಪತ್ತು ಕ್ಷೇತ್ರಗಳನ್ನು ಬಿಎಸ್‍ಪಿಗೆ ಬಿಟ್ಟುಕೊಡುವಂತೆ ನಿರ್ಧಾರ ಮಾಡಲಾಗಿದೆ. ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ಗೆ ಬಿಎಸ್‍ಪಿಯಿಂದ ಬೆಂಬಲ ಸಿಗಲಿದೆ. ಮೈತ್ರಿ ವಿಚಾರವಾಗಿ ಸಿಪಿಐ ಮತ್ತು ಸಿಪಿಎಂ ಜೊತೆ ಕೂಡ ಚರ್ಚೆ ನಡೆಯುತ್ತಿದೆ. ಅವರು ಒಪ್ಪಿಗೆ ನೀಡಿದರೆ ಅವರ ಜೊತೆ ಕೂಡ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ರಾಜ್ಯದ ಕೆಲವು ಕ್ಷೇತ್ರದಲ್ಲಿ ಬಿಎಸ್‍ಪಿ ಅಭ್ಯರ್ಥಿಗಳು ಈಗಾಗಲೇ ಜನತೆಯ ಆಶೀರ್ವಾದ ಪಡೆದಿದ್ದಾರೆ. ಇಂತಹ ಕ್ಷೇತ್ರಗಳನ್ನು ಗುರುತಿಸಿ ಇಪ್ಪತ್ತು ಕ್ಷೇತ್ರಗಳನ್ನು ಬಿಟ್ಟುಕೊಡುತ್ತೇವೆ ಎಂದರು.

ಈ ಕುರಿತು ಸ್ಪಷ್ಟನೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ಮುಂದಿನ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳನ್ನ ಒಂದುಗೂಡಿಸುವ ಸಲುವಾಗಿ ಬಿಎಸ್‍ಪಿ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಂದ ಅನಾಹುತಗಳಾಗಿವೆ. ಜೆಡಿಎಸ್ ಬಹುಮತ ಪಡೆದು ಸರ್ಕಾರ ರಚನೆ ಮಾಡುವ ಸಲುವಾಗಿ ಸಣ್ಣ ಪಕ್ಷಗಳ ಜೊತೆ ಸೇರಿ ಚುನಾವಣೆ ಎದುರಿಸಲು ತೀರ್ಮಾನ ಮಾಡಿದೆ. ಇಪ್ಪತ್ತು ಕ್ಷೇತ್ರಗಳನ್ನು ಬಿಎಸ್‍ಪಿ ಗೆ ಬಿಟ್ಟುಕೊಡುವಂತೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಎರಡು ಪಕ್ಷಗಳು ಒಟ್ಟಾಗಿ ಈ ಚುನಾವಣೆಯನ್ನು ಎದುರಿಸುತ್ತೆವೆ ಎಂದು ತಿಳಿಸಿದರು.