ಬೆಂಗಳೂರು:ವೈದ್ಯೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಂದಿನಿ ಲೇಔಟ್‌ನ ಸಾಕಮ್ಮ ಬಡಾವಣೆ ನಿವಾಸದಲ್ಲಿ ಇಂದು ಬೆಳಕಿಗೆ ಬಂದಿದ್ದು, ಕೃಷ್ಣಾನಂದ ನಗರದ ಬಿಬಿಎಂಪಿ ಆಸ್ಪತ್ರೆಯ ವೈದ್ಯೆಯಾಗಿದ್ದ ಡಾ ಅಶ್ವಿನಿ(32) ಆತ್ಮಹತ್ಯೆಗೆ ಶರಣಾದ ವೈದ್ಯೆ. 3 ವರ್ಷದ ಹಿಂದೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ವೈದ್ಯರಾಗಿರುವ ಡಾ ಲೋಹಿತ್ ಎಂಬುವವರೊಂದಿಗೆ ವಿವಾಹವಾಗಿದ್ದರು. ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನಂದಿನಿ ಲೇಔಟ್‌ನ ಸಾಕಮ್ಮ ಬಡಾವಣೆಯಲ್ಲಿರುವ ತಮ್ಮ ತವರು ಮನೆಯಲ್ಲಿ ವಾಸವಾಗಿದ್ದರು. ತಡರಾತ್ರಿ ಅಶ್ವಿನಿ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಪತಿಯ ಕಿರುಕುಳದಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಶ್ವಿನಿ ಕುಟುಂಬದವರು ಪತಿ ಲೋಹಿತ್ ಮೇಲೆ ಆರೋಪ ಮಾಡುತ್ತಿದ್ದು, ನಂದಿನಿ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.










