ಶ್ರೀ ಡಾ|| ಶಿವಕುಮಾರ ಸ್ವಾಮೀಜಿ ಅವರು ಶಿರಡಿ ಸಾಯಿಬಾಬಾ ಅವರಂತೆ ಬದುಕಿನುದ್ದಕ್ಕೂ ಸಮಾಜಮುಖಿಯಾಗಿ ಬಾಳಿದ ವಿಭೂತಿಪುರುಷರು:ಬಿ.ತಿಪ್ಪೇರುದ್ರಪ್ಪ…

426
firstsuddi

ಚಿಕ್ಕಮಗಳೂರು: ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಡಾ|| ಶಿವಕುಮಾರ ಸ್ವಾಮೀಜಿ ಅವರು ಶಿರಡಿ ಸಾಯಿಬಾಬಾ ಅವರಂತೆ ಬದುಕಿನುದ್ದಕ್ಕೂ ಸಮಾಜಮುಖಿಯಾಗಿ ಬಾಳಿದ ವಿಭೂತಿಪುರುಷರು ಎಂದು ಸಾಹಿತಿ ಬಿ.ತಿಪ್ಪೇರುದ್ರಪ್ಪ ಹೇಳಿದರು.
ನಗರದ ಗೃಹಮಂಡಳಿ ಬಡಾವಣೆಯ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಸಿದ್ದಗಂಗಾಮಠದ ಲಿಂಗೈಕ್ಯ ಶ್ರೀ ಡಾ|| ಶಿವಕುಮಾರಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಕುಮಾರ ಸ್ವಾಮೀಜಿ ಅವರು ಅನ್ನ, ಅರಿವು ಮತ್ತು ಜ್ಞಾನವನ್ನು ಜಾತಿ ಮತ ಭೇದವಿಲ್ಲದೆ ಎಲ್ಲಾ ಜನಾಂಗಕ್ಕೂ ನೀಡಿದ ಮಹಾನ್ ಶಕ್ತಿ, ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಬಡಮಕ್ಕಳ ಬಾಳಿಗೆ ಅವರು ಬೆಳಕಾಗಿದ್ದಾರೆ ಎಂದರು.
ಮಂದಿರದ ಮುಖ್ಯ ಟ್ರಸ್ಟಿ ಜಿ.ಎನ್.ಆನಂದಸಾಯಿ ಮಾತನಾಡಿ ಹಸಿದವರಿಗೆ ಅನ್ನ ನೀಡುವುದು ಕಷ್ಟದಲ್ಲಿದ್ದವರಿಗೆ ನೆರವು ನೀಡುವುದು ಧರ್ಮ ಎಂಬ ಶಿವಕುಮಾರ ಸ್ವಾಮೀಜಿ ಅವರ ತತ್ವವನ್ನು ಎಲ್ಲರೂ ಪಾಲಿಸಬೇಕು ಎಂದು ಸಲಹೆ ಮಾಡಿದರು.
ಪುಣ್ಯಸ್ಮರಣೆ ಪ್ರಯುಕ್ತ ಲಿಂಗೈಕ್ಯ ಸ್ವಾಮೀಜಿ ಅವರ ಭಾವಚಿತ್ರಕ್ಕೆ ನೂರಾರು ಭಕ್ತರು, ಗಣ್ಯರು ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸಿದರು, ಭಜನೆ, ನಾಮಸಂಕೀರ್ತನೆ ಮಾಡಿದರು.
ಸ್ವಾಮೀಜಿ ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು, ಹೇಮ ಆನಂದ್, ಪಂಚಾಕ್ಷರಿ, ಗೋಪಿನಾಥ್, ಪ್ರವೀಣ್, ರುದ್ರೇಶ್ ಹಾಜರಿದ್ದರು.