ಪ್ರತಿಯೊಬ್ಬರೂ ರಕ್ತದಾನವನ್ನು ತಮ್ಮ ಹೊಣಗಾರಿಕೆಯೆಂದು ಭಾವಿಸಬೇಕು: ಹರೀಶ್ ಪಾಂಡೆ…

272
firstsuddi

ಚಿಕ್ಕಮಗಳೂರು: ಸಾರ್ವಜನಿಕರಲ್ಲಿ ಆರೋಗ್ಯ ಮತ್ತು ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೈನ್ ತೇರಾಪಂಥ್ ಯುವಕ ಪರಿಷತ್ ವತಿಯಿಂದ ನಗರದಲ್ಲಿ ಭಾನುವಾರ ಮ್ಯಾರಥಾನ್ ನಡಿಗೆ ಮತ್ತು ರಕ್ತದಾನ ಶಿಬಿರ ನಡೆಯಿತು.
ಎಂ.ಜಿ.ರಸ್ತೆಯ ಐಸಿಐಸಿಐ ಬ್ಯಾಂಕ್ ಮುಂಭಾಗದಲ್ಲಿ ಬೆಳಿಗ್ಗೆ 7 ಗಂಟೆಗೆ ಜಮಾವಣೆಗೊಂಡ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಜೈನ ಸಮುದಾಯದ ನೂರಾರು ಜನ ಮೈಕೊರೆವ ಮಾಗಿ ಚಳಿಯ ನಡುವೆ ಮ್ಯಾರಥಾನ್ ನಡಿಗೆ ಮತ್ತು ಸೈಕಲ್‍ಗಳಲ್ಲಿ ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು.
ನಂತರ ತೇರಾಪಂಥ್ ಭವನದಲ್ಲಿ ಒಂದು ಗಂಟೆ ಕಾಲ ಪ್ರಾಣಾಯಾಮ ಮತ್ತು ಯೋಗಾಸನ ಮಾಡಿದರು, ಇದೇ ವೇಳೆ 108 ದಿನಗಳ ಕಾಲದ ಆರೋಗ್ಯ ವೃದ್ದಿಸುವ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ನಂತರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತೆರಳಿ 60 ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು, ಜೈನ ಸಮುದಾಯದವರೊಂದಿಗೆ ಸಾರ್ವಜನಿಕರೂ ರಕ್ತದಾನದಲ್ಲಿ ಪಾಲ್ಗೊಂಡರು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪೋಲಿಸ್ ಮುಖ್ಯಾಧಿಕಾರಿ ಹರೀಶ್ ಪಾಂಡೆ ಜಗತ್ತಿನಲ್ಲಿ ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದ ದಾನ ರಕ್ತದಾನವಾಗಿದೆ, ಅದು ಪ್ರಾಣವನ್ನು ಉಳಿಸುತ್ತದೆ ಹಾಗಾಗಿ ಪ್ರತಿಯೊಬ್ಬರೂ ರಕ್ತದಾನವನ್ನು ತಮ್ಮ ಹೊಣಗಾರಿಕೆಯೆಂದು ಭಾವಿಸಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜೈನ್ ತೇರಾಪಂಥ್ ಯುವಕ ಪರಿಷತ್‍ನ ಅಧ್ಯಕ್ಷ ನವೀನ್ ಜೈನ್ ಎರಡೂ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು,ರಕ್ತದಾನಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು,
ಜೈನ್ ಸಂಘದ ಅಧ್ಯಕ್ಷ ಗೌತಂಚಂದ್ ಸಿಯಾಲ್ ತೇರಾಪಂಥ್ ಪರಿಷತ್ತಿನ ಅಧ್ಯಕ್ಷ ಮದನ್‍ಚಂದ್ ಗಾದಿಯ, ಜಿಲ್ಲಾ ಸರ್ಜನ್ ಕುಮಾರ್ ನಾಯಕ್, ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ|| ಮುರಳೀಧರ್, ಜೈನ್ ತೇರಾಪಂಥ್ ಯುವಕ ಪರಿಷತ್ತಿನ ಉಪಾಧ್ಯಕ್ಷ ನಿತೇಶ್ ಗಾದಿಯಾ, ಜಂಟಿ ಕಾರ್ಯದರ್ಶಿ ಜಯೇಶ್ ಗಾದಿಯ, ಖಜಾಂಚಿ ಕೈಲಾಶ್ ಕೊಠಾರಿ, ವಕ್ತಾರ ಮಹಾವೀರ್ ಸಕ್ಲೇಚಾ, ಮಾಜಿ ಅಧ್ಯಕ್ಷ ಅನಿಲ್ ಸಕ್ಲೇಚಾ ಹಾಜರಿದ್ದರು.