ಟಿ.ವಿ ಹಾಗೂ ಮೊಬೈಲ್ ಗಳಲ್ಲಿ ಮುಳುಗಿ ಹೋಗಿರುವ ತಾಯಂದಿರೇ ಹುಷಾರ್…

410
firstsuddi
  • ರಾಘವೇಂದ್ರ ಕೆಸವಳಲು

ಅಂದು ಮನೆಯಲ್ಲೆನೋ ವಿಶೇಷ ಸಂದರ್ಭ ತಯಾರಾದ ಅಡಿಗೆಯೊಂದಿಗೆ ಹತ್ತಾರು ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡ ಗೃಹಿಣಿ, ಮನೆಮಂದಿಗೆಲ್ಲಾ ಅದನ್ನು ಪ್ರೀತಿಯಿಂದ ಬಡಿಸುವ ಮೊದಲು ಫೇಸ್ಬುಕ್  ಗೆ ಅಪ್ಲೋಡ್ ಮಾಡಿ ಬರುವ ಕಾಮೆಂಟ್ ಹಾಗೂ ಲೈಕ್ ಗಳಿಗೆ ಕಾಯುತ್ತಾ ಕೂರುತ್ತಾಳೆ. ಗ್ಯಾಜೆಟ್ ಗಳ ಆವಿಷ್ಕಾರ ಹಾಗೂ ಬಳಕೆ ಇಂದು ವಿಪರೀತವಾಗಿ ಆವರಿಸಿರುವುದು ಯುವಜನತೆ ಹಾಗೂ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಮುಖ್ಯ ಪಾತ್ರವಹಿಸುವ  ತಾಯಂದಿರನ್ನು ಪ್ರತಿದಿನ ಶಾಲೆಯಿಂದ ಮನೆಗೆ ಓಡೋಡಿ ಬರುವ ಮಗುವನ್ನು ಪ್ರೀತಿಯಿಂದ ಬರಮಾಡಿಕೊಳ್ಳಬೇಕಾದ ತಾಯಿ ಕೈಲಿ ಫೋನು ಹಿಡಿದು ವಾಟ್ಸಾಪ್  ಎಸ್ಎಂಎಸ್ ಗಳನ್ನೋ  ಫೇಸ್ಬುಕ್, ಟ್ವಿಟ್ಟರ್, ಮೆಸೆಂಜರ್, ಇನ್ಸ್ಟಾಗ್ರಾಮ್, ಹೀಗೆ ಹನುಮಂತನ ಬಾಲದಂತೆ ಬೆಳೆದಿರುವ ಸಾಮಾಜಿಕ ಜಾಲತಾಣಗಳ ಗುಂಗಿನಲ್ಲಿ, ಮುಳುಗಿ ಹೋಗಿರುತ್ತಾಳೆ. ಅರೆಮನಸಿನಿಂದಲೇ ಮಗುವಿಗೆ ಸ್ನಾಕ್ಸ್, ಹಾಗೂ ಹಾಲು, ನೀಡುವ ಅವಳ ಮನಸ್ಸೆಲ್ಲಾ ಸಂಪೂರ್ಣ ಮೊಬೈಲ್ ನಲ್ಲಿಯೇ.

firstsuddi

ಇಲ್ಲಿ ನಿರ್ಲಕ್ಷಿಸಲ್ಪಡುವ ಮಗು ತಾನು ಟಿ ವಿ ಗೆ ಅಂಟಿಕೊಂಡು ಬಿಡುತ್ತದೆ. ಹಲವಾರು ಬಾರಿ ಮೊಬೈಲ್ ಗೇಮ್ ಗಳಿಗೆ ಒಮ್ಮೆ ಹೀಗೆ ಅಂತರ್ಮುಖಿಯಾಗುವ ಮಕ್ಕಳು ತಮ್ಮ ನೈಜವಾದ ಆಟಪಾಠಗಳನ್ನೇ ಕ್ರಮೇಣ ಮರೆಯತೊಡಗುತ್ತಾರೆ. ಅವರ ಅತ್ಯದ್ಭುತ ಕಲ್ಪನಾ ಶಕ್ತಿ ಮಂಕಾಗುತ್ತದೆ. ಕ್ರಿಯಾಶೀಲತೆ ತುಕ್ಕು ಹಿಡಿಯತೊಡಗುತ್ತದೆ. 90ರ ದಶಕದಲ್ಲಿ ಬಾಲಮಂಗಳ, ಚಂದಮಾಮ, ಚಂಪಕ, ಪಂಚತಂತ್ರ, ಮುಂತಾದ ಪುಸ್ತಕಗಳನ್ನು ಕೈಲಿ ಹಿಡಿದು ಮಂತ್ರ ಮುಗ್ದರಾಗಿ ಅಮ್ಮನ ತೊಡೆ ಮೇಲೆ ಕುಳಿತು ಓದುತ್ತಿದ್ದ ಅಥವಾ ಚಿತ್ರಗಳನ್ನು ನೋಡುತ್ತಿದ್ದ ಮಕ್ಕಳು ಇಂದು ಗಂಭೀರವಾಗಿ ಕಂಪ್ಯೂಟರ್ ಅಥವಾ ಮೊಬೈಲ್ ಗೇಮ್ ಗಳಲ್ಲಿಯೋ ಅರ್ಥವೇ ಇಲ್ಲದ ವೈಭವೀಕರಿಸಿದ ಕರ್ಟೂನ್ ಶೋ ಅಥವಾ ಅಸಂಬದ್ಧ ಕಾಮಿಡಿ ಶೋಗಳ ದಾಸರಾಗುತ್ತಿದ್ದಾರೆ.

ಹಲವಾರು ತಿಂಗಳುಗಳ ಹಿಂದೆ ಶಾಲೆಯೊಂದರಲ್ಲಿ ಹಿರಿಯ ವಿದ್ಯಾರ್ಥಿಯೊಬ್ಬ ಕೇವಲ ಪರೀಕ್ಷೆಯನ್ನು ಮುಂದೂಡುವ ಸಲುವಾಗಿ ಕಿರಿಯ ವಿದ್ಯಾರ್ಥಿಯಾಬ್ಬನನ್ನು ಶಾಲಾ ಶೌಚಾಲಯವೊಂದರಲ್ಲಿ ಕೊಲೆಗೈಯುತ್ತಾನೆ .ಇನ್ನೆಲ್ಲೋ ಸರಣಿ ಧಾರಾವಾಹಿಗಳ ಸರಪಳಿಯ ಒಂದು ದೃಶ್ಯವನ್ನು ಅನುಕರಿಸಲು ಹೋದ ಪುಟ್ಟ ಬಾಲೆ ಬೆಂಕಿಗಾಹುತಿಯಾಗುತ್ತಾಳೆ.

ನಾವೆಲ್ಲಿ ತಪ್ಪು ಮಾಡುತ್ತಿದ್ದೇವೆ ಎಂದು ಯೋಚಿಸಿದರೆ, ಮಕ್ಕಳಿಗೆ ಅವರ ಸರಿ ತಪ್ಪುಗಳು ಹಾಗೂ ಅವರ ಬಿಡುವಿನ ಸಮಯದ ಸದ್ಬಳಕೆಯ ಬಗ್ಗೆ ನಿಗಾ ವಹಿಸಬೇಕಾಗಿರುವ ತಾಯಂದಿರು ತಮ್ಮ  ಜವಾಬ್ದಾರಿ ಮರೆತು ಮುತ್ತಿನಂತಿರುವ ಮಕ್ಕಳ ಮಾನಸಿಕ ಬೆಳವಣಿಗೆಯ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಇಂದು ಹೆಚ್ಚಿನ ಮನೆಗಳಲ್ಲಿನ ಪರಿಸ್ಥಿತಿಯಾಗಿದೆ.

ಗ್ಯಾಜೆಟ್  ಗಳ ಬಳಕೆಯೇ ಪ್ರತಿಷ್ಠೆಯ ಪರಾಕಾಷ್ಟೆ ಎಂದು ನಂಬಿರುವ ತಾಯಂದಿರೇ ದಯವಿಟ್ಟು ನಿಮ್ಮ ಮುದ್ದು ಕಂದಮ್ಮಗಳ ಮನೋ ವಿಕಾಸದ ಅಗತ್ಯತೆಯನ್ನು ಅರಿತು ಅವರ ಬೌದ್ಧಿಕ ಗುಣಮಟ್ಟವನ್ನು ಹೆಚ್ಚಿಸುವ ಚಟುವಟಿಕೆಗಳತ್ತ ಗಮನ ಕೊಡಿ. ಪ್ರತಿಷ್ಠೆ ಹಾಗೂ ಆಧುನಿಕತೆ ಬದುಕಿನ ಗುಣಮಟ್ಟವನ್ನು ಹಾಗೂ ವ್ಯಕ್ತಿತ್ವವನ್ನು ಖಂಡಿತಾ ಹೆಚ್ಚಿಸಲಾರದು. ಇನ್ನಾದರೂ ಎಚ್ಛೆತ್ತು ಆದಷ್ಟು ಮಕ್ಕಳೊಂದಿಗೆ ತಮ್ಮ ಸಮಯವನ್ನು ಕಳೆಯಿರಿ ಹಾಗೂ ನಿಮ್ಮ ಮಕ್ಕಳಿಗೆ ಪರಂಪರೆ, ಸಂಸ್ಕೃತಿ, ಹಾಗೆಯೇ ಇತರರೊಡನೆ ಬೆರೆಯುವ ರೀತಿ, ನೀತಿ, ಸ್ಪಂದಿಸುವ ಮನೋಭಾವನೆ, ಇವುಗಳನ್ನು ಮೈಗೂಡಿಕೊಳ್ಳುವ ಅವಕಾಶವನ್ನು ಒದಗಿಸಿಕೊಡಿ.