ಬೆಂಗಳೂರು: 17 ವರ್ಷಗಳ ಬಳಿಕ ವಿಶ್ವಸುಂದರಿ ಸ್ಥಾನವನ್ನು ಭಾರತಕ್ಕೆ ತಂದುಕೊಟ್ಟ ಮಾನುಷಿ ಚಿಲ್ಲರ್ ಬಾಲ್ಯದ ಐದು ವರ್ಷಗಳನ್ನು ಬೆಂಗಳೂರಿನಲ್ಲಿ ಕಳೆದಿದ್ದರು! 21 ವರ್ಷ ವಯಸ್ಸಿನ ವಿಶ್ವಸುಂದರಿ ಚಿಲ್ಲರ್ಗೆ ಬೆಂಗಳೂರಿನ ನಂಟಿದೆ. 1997 ರಲ್ಲಿ ಹರಿಯಾಣದಲ್ಲಿ ಡಾ.ಮಿತ್ರಾ ಬಸು ಹಾಗೂ ಡಾ.ನೀಲಮ್ ದಂಪತಿಗೆ ಜನಿಸಿದ ಮಾನುಷಿ ಎರಡು ವರ್ಷಗಳವರೆಗೆ ಅಲ್ಲಿಯೇ ನೆಲೆಸಿದ್ದಳು. ಬಳಿಕ ದಂಪತಿ ಬೆಂಗಳೂರಿಗೆ ಬಂದು ಐದು ವರ್ಷಗಳ ಕಾಲ ವಾಸವಿದ್ದರು. 1999ರಿಂದ 2004ರವರೆಗೆ ಬೆಂಗಳೂರಿನಲ್ಲಿ ವಾಸವಿದ್ದ ಸಮಯದಲ್ಲಿ ಆಕೆ ಕೂಚಿಪುಡಿ ನೃತ್ಯದ ತರಬೇತಿ ಪಡೆದಿದ್ದಳು.
”ಮಾನುಷಿ ಎಲ್ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಯವರೆಗಿನ ವ್ಯಾಸಂಗವನ್ನು ನಗರದಲ್ಲೇ ಪಡೆದಿದ್ದಳು. ಬಾಲ್ಯದಲ್ಲೇ ಓದಿನಲ್ಲಿ ಚುರುಕಾಗಿದ್ದ ಆಕೆ ತರಗತಿಯಲ್ಲಿ ಸದಾ ಮೊದಲ ಸ್ಥಾನ ಪಡೆಯುತ್ತಿದ್ದಳು. ಯಾವುದನ್ನೂ ಪಟ್ಟು ಬಿಡದೆ ಮಾಡುತ್ತಿದ್ದಳು. ಬೆಂಗಳೂರಿನಿಂದ ಹರಿಯಾಣಕ್ಕೆ ಬಂದ ಮೇಲೆ ಮತ್ತೊಂದು ಶಾಲೆಗೆ ಸೇರ್ಪಡೆಗೊಳಿಸಲಾಯಿತು. ಅಲ್ಲಿಯೂ ಆಕೆ ಎಲ್ಲದರಲ್ಲೂ ಮೊದಲ ಸ್ಥಾನ ಪಡೆಯುತ್ತಿದ್ದಳು,” ಎಂದು ಉಷಾ ತಿಳಿಸಿದರು.
ಉಷಾ ಪತಿ ಡಾ.ದಿನೇಶ್ ಚಿಲ್ಲರ್ ಮಾತನಾಡಿ, ”ಆಲ್ ಇಂಡಿಯಾ ಮೆಡಿಕಲ್ ಪ್ರವೇಶ ಪರೀಕ್ಷೆಯನ್ನು ಮಾನುಷಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಪೂರೈಸಿದ್ದಳು. ದ್ವಿತೀಯ ಪಿಯುಸಿಯಲ್ಲಿ ಎಲ್ಲ ವಿಷಯಗಳಲ್ಲಿ ಶೇ.96 ಅಂಕ ಗಳಿಸಿದ್ದಳು,” ಎಂದು ನೆನಪಿಸಿಕೊಂಡರು