ಚೀನಾದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹಾಗೂ ವೇಗವಾಗಿ ಹರಡಿ ಈಗಾಗಲೇ 700ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ. ಚೀನಾದ ವುಹಾನ್‍ನಲ್ಲಿ ಕಾಣಿಸಿಕೊಂಡ ಈ ಮಾರಣಾಂತಿಕ ವೈರಸ್ ಜಗತ್ತಿನಾದ್ಯಂತ ಹರಡಿ ಆತಂಕ ಸೃಷ್ಠಿಸಿದೆ.
1960ರಲ್ಲಿ ಮೊದಲ ಬಾರಿಗೆ ಈ ಕೊರೊನಾ ವೈರಸ್ ಕಂಡು ಬಂದಿದೆ. ಇಲ್ಲಿಯವರೆಗೆ ಆರು ರೀತಿಯ ಕೊರೊನಾ ವೈರಸ್ ಪತ್ತೆಯಾಗಿದ್ದು, ಈಗಾ ಪತ್ತೆಯಾಗಿರುವುದು ಕೊರೊನಾ ಕುಟುಂಬದ 7ನೇ ವಿಧವಾಗಿದೆ. ಈ ಕೊರೊನಾ ವೈರಸ್‍ಗೆ 2019-ಎನ್‍ಸಿಓವಿ ಎಂದು ಹೆಸರಿಡಲಾಗಿದೆ.
ಕೊರೊನಾ ಎಂಬುವುದು ಲ್ಯಾಟಿನ್ ಭಾಷೆಯ ಪದವಾಗಿದೆ. ಲ್ಯಾಟಿನ್‍ನಲ್ಲಿ ಕೊರೊನಾ ಎಂದರೆ ಅರ್ಥ ಕಿರೀಟ. ಮೈಕ್ರೋಸ್ಕೋಪ್‍ನಲ್ಲಿ ಈ ವೈರಸ್‍ನ್ನು ವೀಕ್ಷಿಸಿದಾಗ ಕಿರೀಟದ ಆಕಾರದಲ್ಲಿ ಕಂಡು ಬಂದಿದ್ದರಿಂದ ಇದಕ್ಕೆ ಕೊರೊನಾ ಎಂದು ಹೆಸರಿಡಲಾಗಿದೆ.
ಇನ್ನು ಈ ಕೊರೊನಾ ವೈರಸ್ SARS (Sever Acute Respiratory Synalrome Coronavirus) ರೀತಿಯ ಲಕ್ಷಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. 2002 ಮತ್ತು 2003ರಲ್ಲಿ ಸಾರ್ಸ್ ಎಂಬ ಮಹಾಮಾರಿ ವೈರಸ್ ಚೀನಾದಲ್ಲಿ ನೂರಾರು ಜನರನ್ನು ಬಲಿ ಪಡೆದುಕೊಂಡಿತ್ತು.
ಕೊರೊನಾ ವೈರಸ್ ಒಂದು ರೀತಿಯ ಪ್ರಾಣ ಹಾನಿ ಉಂಟುಮಾಡುವ ವೈರಸ್ ಆಗಿದ್ದು, ಈ ವೈರಸ್ ಪ್ರಾಣಿ ಪಕ್ಷಿಗಳಿಂದ ಅಥವಾ ಸಮುದ್ರ ಆಹಾರಗಳಿಂದ ಸುಲಭವಾಗಿ ಮಾನವನಿಗೆ ಹರಡುತ್ತದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಈ ವೈರಸ್‍ಗೆ ನಿಖರವಾದ ಕಾರಣ ಏನು ಎಂಬುವುದಕ್ಕೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ.
ಕೊರೊನಾ ವೈರಸ್ ಶ್ವಾಸಕೋಶದ ಮೇಲೆ ಪ್ರಭಾವ ಬೀರಿ ಉಸಿರಾಟದ ತೊಂದರೆಯನ್ನು ಉಂಟು ಮಾಡುತ್ತದೆ. ಈ ಕೊರೊನಾ ವೈರಸ್‍ಗೆ ನಿಖರವಾದ ಚಿಕಿತ್ಸೆಯನ್ನು ಕಂಡು ಹಿಡಿದಿಲ್ಲ.
ಕೊರೊನಾ ವೈರಸ್ ವೇಗವಾಗಿ ಹಾಗೂ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರ 10 ದಿನದಲ್ಲಿ ಒಂದು ಸಾವಿರ ಹಾಸಿಗೆಗಳ ಸೌಲಭ್ಯವುಳ್ಳ ಆಸ್ಪತ್ರೆಯನ್ನು ಕೊರೊನಾ ವೈರಸ್‍ಗೆ ತುತ್ತಾದ ರೋಗಿಗಳಿಗಾಗಿ ನಿರ್ಮಿಸಿದೆ.
ಕೊರೊನಾ ವೈರಸ್‍ಗೆ ಸಂಬಂಧಿಸಿದಂತೆ ಚೀನಾದ ನೆರೆ ಹೊರೆ ರಾಷ್ಟ್ರಗಳಿಗೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ(WHO) ಮಾರ್ಗದರ್ಶನ ನೀಡಿದ್ದು, ಕೊರೊನಾ ವೈರಸ್ ಹಲವು ರಾಷ್ಟ್ರಗಳಿಗೆ ಹರಡಿರುವ ಹಿನ್ನೆಲೆಯಲ್ಲಿ ಇದನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು WHO ಘೋಷಿಸಿದೆ.
ಚೀನಾದ ವುಹಾನ್‍ನಲ್ಲಿ ಸಿಲುಕಿದ್ದ 324 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ತಪಾಸಣೆ ನಡೆಸಲಾಗುತ್ತಿದೆ. ಇವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಆಗಿದ್ದಾರೆ. ಭಾರತಕ್ಕೂ ಈ ಡೆಡ್ಲಿ ಕೊರೊನಾ ವೈರಸ್ ಕಾಲಿಟ್ಟಿದೆ ಎನ್ನಲಾಗುತ್ತಿದ್ದು, ಈಗಾಗಲೇ ಕೇರಳದ ಮೂವರಲ್ಲಿ ಈ ಸೋಂಕು ಪತ್ತೆಯಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ.
ಇನ್ನು ರಾಜ್ಯದಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದ್ದು, ಯಾರು ಆತಂಕ ಪಡಬೇಕಾಗಿಲ್ಲ. ರಾಜ್ಯಕ್ಕೆ ವಿದೇಶದಿಂದ ಬಂದ 44 ಜನ ಪ್ರವಾಸಿಗರ ರಕ್ತ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 29 ಜನರಿಗೆ ಕೊರೊನಾ ವೈರಸ್ ಇಲ್ಲ ಎಂದು ವರದಿ ಬಂದಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಹತ್ತು ಹಾಸಿಗೆಯುಳ್ಳ ವಾರ್ಡ್‍ಗಳನ್ನು ಸಿದ್ಧಪಡಿಸಲಾಗಿದೆ. ಇದುವರೆಗೂ ರಾಜ್ಯದಲ್ಲಿ ಒಂದು ಕೊರೊನಾ ವೈರಸ್ ಪ್ರಕರಣ ದಾಖಲಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು ಅವರು ತಿಳಿಸಿದ್ದಾರೆ.
ಕೊರೊನಾ ವೈರಸ್ ಲಕ್ಷಣಗಳು :
• ಜ್ವರ
• ಉಸಿರಾಟದ ತೊಂದರೆ
• ನ್ಯುಮೋನಿಯಾ
• ಬೇದಿ
• ಕೆಮ್ಮು
• ಶೀತ
• ಗಂಟಲು ನೋವು
• ತಲೆನೋವು
ಕೊರೊನಾ ವೈರಸ್ ಹರಡುವುದು ಹೇಗೆ..?
ಕೊರೊನಾ ವೈರಸ್ ಸಾಮಾನ್ಯ ಫ್ಲೂ ಹರಡುವ ರೀತಿಯಲ್ಲಿಯೇ ಹರಡುತ್ತದೆ. ಸೋಂಕಿತರು ಸೀನಿದಾಗ, ಕೆಮ್ಮಿದಾಗ, ಸೋಂಕಿತ ವ್ಯಕ್ತಿಯ ಜೊತೆ ನಿಕಟ ಸಂಪರ್ಕ ಹೊಂದಿದಾಗ, ವೈಯಕ್ತಿಕ ಸ್ವಚ್ಛತೆ ಇಲ್ಲದೇ ಮಾಗು ಬಾಯಿಯನ್ನು ಮುಟ್ಟುವುದರಿಂದ ವೈರಸ್‍ಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇರುತ್ತದೆ.
ಮುನ್ನೆಚ್ಚರಿಕಾ ಕ್ರಮಗಳು
• ಕೈಯನ್ನು ಆಗಾಗ ಸ್ವಚ್ಛವಾಗಿ ತೊಳೆದುಕೊಳ್ಳಬೇಕು.
• ಕೆಮ್ಮುವಾಗ ಹಾಗೂ ಸೀನುವಾಗ ಕರವಸ್ತ್ರ ಉಪಯೋಗಿಸುವುದು.
• ಕಣ್ಣು, ಬಾಯಿ, ಮೂಗನ್ನು ಪದೇ ಪದೇ ಮುಟ್ಟಬಾರದು.
• ಸೋಂಕು ಪೀಡಿತ ವ್ಯಕ್ತಿಯಿಂದ ದೂರವಿರುವುದು.
• ಪ್ರಾಣಿಗಳ ಸಂಪರ್ಕದಿಂದ ದೂರವಿರುವುದು.
• ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸಬೇಕು
• ಸುತ್ತ ಮುತ್ತ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು.
• ಸೋಂಕಿನ ಒಂದು ಲಕ್ಷಣ ಕಂಡುಬಂದರೂ ತಕ್ಷಣ ಆಸ್ಪತ್ರೆಗೆ ಭೆಟಿ ನೀಡಿ ಪರೀಕ್ಷೆ ಮಾಡಿಕೊಳ್ಳುವುದು ಒಳಿತು.










