ಚಿಕ್ಕಮಗಳೂರು – ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲಾ ಮತ, ಧರ್ಮ ಮತ್ತು ಜಾತಿಯವರು ಒಗ್ಗೂಡಿ ಸಾಗಿದರೆ ಮಾತ್ರ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಕರ್ನಾಟಕ ಬ್ಯಾರಿ ಸಾಹಿತ್ಯ ಆಕಾಡೆಮಿ ಹಾಗೂ ಜಿಲ್ಲಾ ಬ್ಯಾರಿಗಳ ಒಕ್ಕೂಟ ನಗರದ ಕುವೆಂಪು ಕಲಾ ಮಂದಿರದಲ್ಲಿ ಸೋಮವಾರ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಭಾರತ ಸರ್ವ ಜನಾಂಗದ ಶಾಂತಿಯ ತೋಟ, ಅನೇಕತೆಯಲ್ಲಿ ಏಕತೆಯನ್ನು ಕಂಡ ರಾಷ್ಟ್ರ, ಇಲ್ಲಿ ಎಲ್ಲಾ ಮತ, ಧರ್ಮ ಮತ್ತು ಜಾತಿಯವರೂ ಇದ್ದಾರೆ, ಅವರೆಲ್ಲರಿಗೂ ಬದುಕಲು ಸಮಾನವಾದ ಹಕ್ಕಿದೆ ಎಂದ ಅವರು ಭಾರತಕ್ಕೆ ಭವ್ಯವಾದ ಭವಿಷ್ಯವಿದೆ ಆದರೆ ಜಾತ್ಯಾತೀತ ಮನೋಭಾವದ ಕೊರತೆಯಿಂದಾಗಿ ಅದಕ್ಕೆ ತೊಡಕಾಗುತ್ತಿದೆ ಎಂದು ವಿಷಾದಿಸಿದರು.ಜಾತಿ, ಮತ ಮತ್ತು ಧರ್ಮವನ್ನು ವಿಂಗಡನೆ ಮಾಡುತ್ತಾ ಹೋದರೆ ದೇಶದ ಭವಿಷ್ಯ ಮಸುಕಾಗುತ್ತದೆ ಎಂದು ಎಚ್ಚರಿಸಿದ ಅವರು, ಇದನ್ನು ಈಗಲಾಗದರೂ ಅರಿತು ಎಲ್ಲರೂ ಒಗ್ಗೂಡಿ ದೇಶ ಕಟ್ಟಲು ಮುಂದಾಗಬೇಕು ಎಂದು ಮನವಿ ಮಾಡಿದರು.ಕರ್ನಾಟಕ ಬ್ಯಾರಿ ಸಾಹಿತ್ಯ ಆಕಾಡಮಿ ವತಿಯಿಂದ ಮಂಗಳೂರಿನಲ್ಲಿ ನಿರ್ಮಿಸಲಿರುವ ಬ್ಯಾರಿ ಭವನಕ್ಕೆ ಅನುದಾನ ಮತ್ತು ಬ್ಯಾರಿ ಒಕ್ಕೂಟಕ್ಕೆ ಜಿಲ್ಲೆಯಲ್ಲಿ ಭೂಮಿಯನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್.ಧರ್ಮೇಗೌಡ ಮಾತನಾಡಿ ಬ್ಯಾರಿ ಭವನದ ನಿರ್ಮಾಣಕ್ಕೆ 8 ಕೋಟಿ ಅನುದಾನ ಮತ್ತು ಬ್ಯಾರಿ ಒಕ್ಕೂಟಕ್ಕೆ ಜಿಲ್ಲೆಯಲ್ಲಿ ಭೂಮಿ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ ಭವನ ನಿರ್ಮಾಣಕ್ಕೆ ಅನುದಾನ ಮತ್ತು ಭೂಮಿ ಮಂಜೂರಾತಿಗೆ ಮನವಿ ಸಲ್ಲಿಸಲು ಬ್ಯಾರಿ ಸಮುದಾಯದ ಮುಖಂಡರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ಯಲಾಗುವುದು, ಬ್ಯಾರಿ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿಂದಲೇ ಶಂಕು ಸ್ಥಾಪನೆ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾರಿ ಸಾಹಿತ್ಯ ಆಕಾಡೆಮಿಯ ಅಧ್ಯಕ್ಷ ಕೆ.ಮಹಮ್ಮದ್, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಧರ್ಮೇಗೌಡ ಮತ್ತು ಎಸ್.ಎಲ್.ಭೋಜೇಗೌಡ ಅವರು ತಮ್ಮನ್ನು ಈ ಹಿಂದೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಳಿ ಕರೆದೊಯ್ದು, ಆಕಾಡೆಮಿಯನ್ನು ಸ್ಥಾಪಿಸುವಂತೆ ಮನವಿ ಮಾಡಿದ್ದರು, ಅವರ ಪ್ರಯತ್ನದಿಂದಾಗಿ ಬ್ಯಾರಿ ಸಾಹಿತ್ಯ ಆಕಾಡೆಮಿ ಅಸ್ತಿತ್ವಕ್ಕೆ ಬಂದಿದೆ ಎಂದು ತಿಳಿಸಿದರು.
ಶಾಸಕ ಟಿ.ಡಿ.ರಾಜೇಗೌಡರೂ ಸಹ ತಮ್ಮ ಸಮುದಾಯಕ್ಕೆ ಹೆಚ್ಚಿನ ನೆರವು ನೀಡಿದ್ದಾರೆ ಎಂದ ಅವರು ಈ ಹಿನ್ನೆಲೆಯಲ್ಲಿ ಈ ಮೂರೂ ಜನರಿಗೆ ಕೃತಜ್ಞತೆ ಅರ್ಪಿಸುವ ನಿಟ್ಟಿನಲ್ಲಿ ಈ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಧರ್ಮೇಗೌಡ, ಎಸ್.ಎಲ್.ಭೋಜೇಗೌಡ ಮತ್ತು ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.ಕರ್ನಾಟಕ ಬ್ಯಾರಿ ಸಾಹಿತ್ಯ ಆಕಾಡೆಮಿ ವತಿಯಿಂದ ಮಂಗಳೂರಿನಲ್ಲಿ ನಿರ್ಮಿಸಲಾಗುವ ಬ್ಯಾರಿ ಭವನಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ಮತ್ತು ಬ್ಯಾರಿ ಒಕ್ಕೂಟಕ್ಕೆ ಜಿಲ್ಲೆಯಲ್ಲಿ ಭೂಮಿ ಮಂಜೂರು ಮಾಡಿಸುವಂತೆ ಮೂರೂ ಶಾಸಕರಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಗೌರವಾಧ್ಯಕ್ಷ ಸಿ.ಎಸ್.ಖಲಂದರ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎಂ.ಸತೀಶ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಖಾಂಡ್ಯ ಹೋಬಳಿ ಅಧ್ಯಕ್ಷ ಸೋಮೇಶ್, ಅಂಜುಮನ್ ಇಸ್ಲಾಮಿಯ ಅಧ್ಯಕ್ಷ ನಜೀರ್ ಅಹಮದ್, ಎ.ಆರ್.ಷರೀಫ್, ಮೊಹಮದ್ ಅಕ್ಬರ್, ಮಹಮದ್ ಹನೀಫ್ ಉಪಸ್ಥಿತರಿದ್ದರು.ಸಮಾರಂಭಕ್ಕೆ ಮುನ್ನ ಸತೀಶ್ ಸುರತ್ಕಲ್ ಹಾಗೂ ಆಶ್ರಫ್ ಅಪೋಲೋ ತಂಡದಿಂದ ಬ್ಯಾರಿ ಗೀತೆಗಳ ಗಾಯನ ನಡೆಯಿತು.
Home ಸ್ಥಳಿಯ ಸುದ್ದಿ ಜಾತಿ, ಮತ ಮತ್ತು ಧರ್ಮವನ್ನು ವಿಂಗಡನೆ ಮಾಡುತ್ತಾ ಹೋದರೆ ದೇಶದ ಭವಿಷ್ಯ ಮಸುಕಾಗುತ್ತದೆ.- ಶಾಸಕ ಟಿ.ಡಿ.ರಾಜೇಗೌಡ…